ಜಾಗತಿಕ ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆಯುತ್ತಿದೆ. 2025ರಲ್ಲಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನ, ಈಗ ಭಾರತದ ವಿರುದ್ಧ ರಕ್ಷಣಾತ್ಮಕವಾಗಿ ಬಲಗೊಳ್ಳಲು ಹೊಸದೊಂದು ಮತ್ತು ಬೃಹತ್ ಯೋಜನೆಯನ್ನು ರೂಪಿಸಿದೆ. ಕೇವಲ ಚೀನಾವನ್ನು ನಂಬಿ ಕೂತರೆ ಭಾರತವನ್ನು ಎದುರಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತಿರುವ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿಯ ನೇತೃತ್ವದಲ್ಲಿ ಜಗತ್ತಿನ 43 ಮುಸ್ಲಿಂ ರಾಷ್ಟ್ರಗಳನ್ನು ಒಂದೇ ವೇದಿಕೆಯಡಿ ತರುತ್ತಿದೆ. ಇದಕ್ಕೆ ಇಸ್ಲಾಮಿಕ್ ನ್ಯಾಟೋ ಅಥವಾ ಇಸ್ಲಾಮಿಕ್ ಮಿಲಿಟರಿ ಕೌಂಟರ್ ಟೆರರಿಸಂ ಕೋಲಿಶನ್ ಎಂದು ಹೆಸರಿಡಲಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.
ಪಾಕಿಸ್ತಾನದ ಹೊಸ ದಾಳ ಇಸ್ಲಾಮಿಕ್ ನ್ಯಾಟೋ
ಪಾಶ್ಚಿಮಾತ್ಯ ದೇಶಗಳ ಒಕ್ಕೂಟವಾದ ನ್ಯಾಟೋ ಮಾದರಿಯಲ್ಲೇ ಈ ಹೊಸ ಇಸ್ಲಾಮಿಕ್ ಒಕ್ಕೂಟವನ್ನು ರಚಿಸಲಾಗುತ್ತಿದೆ. 1949ರಲ್ಲಿ ಅಮೆರಿಕ ಮತ್ತು ಯುರೋಪಿನ ರಾಷ್ಟ್ರಗಳು ತಮ್ಮ ರಕ್ಷಣೆಗಾಗಿ ಮಾಡಿಕೊಂಡ ಒಪ್ಪಂದದಂತೆಯೇ, ಈ 43 ಮುಸ್ಲಿಂ ರಾಷ್ಟ್ರಗಳು ಪರಸ್ಪರ ರಕ್ಷಣೆಗೆ ಬದ್ಧವಾಗಿರಲಿವೆ. ಇದರ ಪ್ರಮುಖ ಉದ್ದೇಶವೆಂದರೆ, ಈ ಒಕ್ಕೂಟದ ಯಾವುದೇ ಒಂದು ದೇಶದ ಮೇಲೆ ಹೊರಗಿನಿಂದ ದಾಳಿಯಾದರೆ, ಉಳಿದ 42 ರಾಷ್ಟ್ರಗಳು ಒಗ್ಗೂಡಿ ಆ ಶತ್ರು ರಾಷ್ಟ್ರದ ಮೇಲೆ ಮುಗಿಬೀಳಲಿವೆ. ಸೈನ್ಯ, ಗುಪ್ತಚರ ಮಾಹಿತಿ ಮತ್ತು ರಕ್ಷಣಾ ತಂತ್ರಜ್ಞಾನವನ್ನು ಈ ರಾಷ್ಟ್ರಗಳು ಪರಸ್ಪರ ಹಂಚಿಕೊಳ್ಳಲಿವೆ.
ಮೂರು ಶಕ್ತಿಗಳ ಸಂಗಮ ಮತ್ತು ಪಾಕಿಸ್ತಾನದ ಪಾತ್ರ
ಈ ಬೃಹತ್ ಮೈತ್ರಿಕೂಟದ ಹಿಂದಿನ ಪ್ರಮುಖ ರೂವಾರಿಗಳು ಮೂರು ದೇಶಗಳು. ಈ ಒಕ್ಕೂಟಕ್ಕೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಅಂದರೆ ಫಂಡಿಂಗ್ ಅನ್ನು ಸೌದಿ ಅರೇಬಿಯಾ ನೋಡಿಕೊಳ್ಳಲಿದೆ. ಟರ್ಕಿಯು ತನ್ನ ಅತ್ಯಾಧುನಿಕ ಡ್ರೋನ್ ಮತ್ತು ಕ್ಷಿಪಣಿ ತಂತ್ರಜ್ಞಾನವನ್ನು ಪೂರೈಸಲಿದೆ. ಇನ್ನು ಪಾಕಿಸ್ತಾನವು ತನ್ನಲ್ಲಿರುವ ಪರಮಾಣು ಅಸ್ತ್ರಗಳು, ಖಂಡಾಂತರ ಕ್ಷಿಪಣಿಗಳು ಮತ್ತು ಅಪಾರ ಸಂಖ್ಯೆಯ ಸೈನಿಕ ಬಲವನ್ನು ಈ ಒಕ್ಕೂಟಕ್ಕಾಗಿ ಮೀಸಲಿಡಲಿದೆ. ಮೂಲತಃ ಇದು ಪಾಕಿಸ್ತಾನದ ಐಡಿಯಾ ಆಗಿದ್ದು, ಭಾರತದ ಭಯದಿಂದ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಈ ಮಾರ್ಗ ಕಂಡುಕೊಂಡಿದೆ.
ಸುನ್ನಿ ಸಮುದಾಯದ ಕಾರ್ಡ್ ಬಳಸಿದ ಪಾಕ್
ಜಗತ್ತಿನಾದ್ಯಂತ ಹರಡಿರುವ ಮುಸ್ಲಿಂ ರಾಷ್ಟ್ರಗಳನ್ನು ಒಂದುಗೂಡಿಸುವುದು ಸುಲಭದ ಮಾತಲ್ಲ. ಆದರೆ ಪಾಕಿಸ್ತಾನ ಇದಕ್ಕೆ ಧರ್ಮದ ಅಸ್ತ್ರವನ್ನು ಬಳಸಿದೆ. ಮುಸ್ಲಿಮರಲ್ಲಿನ ಸುನ್ನಿ ಪಂಗಡದ ರಾಷ್ಟ್ರಗಳನ್ನು ಟಾರ್ಗೆಟ್ ಮಾಡಿ, ಅವರನ್ನು ಒಂದೇ ವೇದಿಕೆಗೆ ತರುವಲ್ಲಿ ಯಶಸ್ವಿಯಾಗಿದೆ. ಆಫ್ರಿಕಾ ಖಂಡದ ನೈಜೀರಿಯಾ, ಈಜಿಪ್ಟ್, ಮೊರೊಕ್ಕೊ, ಸುಡಾನ್ ನಿಂದ ಹಿಡಿದು, ಏಷ್ಯಾದ ಮಲೇಷ್ಯಾ, ಬಾಂಗ್ಲಾದೇಶ, ಬ್ರುನೈ ಹಾಗೂ ಯುರೋಪಿನ ಅಲ್ಬೇನಿಯಾ ಮತ್ತು ಟರ್ಕಿಯಂತಹ ದೇಶಗಳು ಈ ಪಟ್ಟಿಯಲ್ಲಿವೆ.
ಆಪರೇಷನ್ ಸಿಂಧೂರ್ ನಂತರದ ಬದಲಾವಣೆ
ಕಳೆದ ವರ್ಷ ಮೇ ತಿಂಗಳಲ್ಲಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಪಾಕಿಸ್ತಾನದ ಸೇನಾ ವಲಯದಲ್ಲಿ ನಡುಕ ಹುಟ್ಟಿಸಿದೆ. ಗಡಿಯಲ್ಲಿ ಸಣ್ಣ ಸದ್ದು ಕೇಳಿದರೂ ಪಾಕಿಸ್ತಾನದ ಸೇನೆ ಬೆಚ್ಚಿಬೀಳುವಂತಾಗಿದೆ. ಭಾರತ ಯಾವುದೇ ಕ್ಷಣದಲ್ಲಿ ತನ್ನ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆಸಬಹುದು ಎಂಬ ಭೀತಿಯಲ್ಲಿರುವ ಪಾಕಿಸ್ತಾನ, ಏಕಾಂಗಿಯಾಗಿ ಹೋರಾಡುವ ಸಾಮರ್ಥ್ಯ ಕಳೆದುಕೊಂಡಿದೆ. ಹೀಗಾಗಿಯೇ 43 ರಾಷ್ಟ್ರಗಳ ಬಲವನ್ನು ತನ್ನ ಬೆನ್ನಿಗೆ ಕಟ್ಟಿಕೊಳ್ಳಲು ಮುಂದಾಗಿದೆ.
ಜಾಗತಿಕವಾಗಿ ಹೆಚ್ಚಿದ ಯುದ್ಧದ ಕಾರ್ಮೋಡ
ಒಂದೆಡೆ ಪಾಕಿಸ್ತಾನದ ಈ ನಡೆ ಆತಂಕ ಮೂಡಿಸುತ್ತಿದ್ದರೆ, ಇನ್ನೊಂದೆಡೆ ರಷ್ಯಾ ಮತ್ತು ನ್ಯಾಟೋ ನಡುವಿನ ಸಂಘರ್ಷ ತಾರಕಕ್ಕೇರಿದೆ. 2029ರ ವೇಳೆಗೆ ರಷ್ಯಾ ನ್ಯಾಟೋ ರಾಷ್ಟ್ರಗಳ ಮೇಲೆ ನೇರ ಯುದ್ಧ ಆರಂಭಿಸಬಹುದು ಎಂದು ಜರ್ಮನಿಯ ಗುಪ್ತಚರ ಇಲಾಖೆ ಎಚ್ಚರಿಸಿದೆ. ಪುಟಿನ್ ಅವರ ಮುಂದಿನ ಗುರಿ ಯುರೋಪಿಯನ್ ಒಕ್ಕೂಟವಾಗಿದೆ ಎಂಬ ವರದಿಗಳು ಆತಂಕ ಹೆಚ್ಚಿಸಿವೆ.
ಇನ್ನೊಂದೆಡೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ನಿರ್ಧಾರಗಳು ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ. ರಷ್ಯಾದ ಆರ್ಥಿಕತೆಯನ್ನು ಕುಗ್ಗಿಸಲು ಚೀನಾ ಮೇಲೆ ಕಠಿಣ ಸುಂಕ ವಿಧಿಸಲು ಟ್ರಂಪ್ ನ್ಯಾಟೋಗೆ ಕರೆ ನೀಡಿದ್ದಾರೆ. ಅಲ್ಲದೆ, ರಷ್ಯಾದಿಂದ ತೈಲ ಖರೀದಿಸುವ ಭಾರತದ ಮೇಲೂ ಒತ್ತಡ ಹೇರಲಾಗುತ್ತಿದೆ. ನ್ಯಾಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಕೂಡ ಟ್ರಂಪ್ ಅವರ ನಿರ್ಧಾರಗಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಭಾರತದ ಸರಕುಗಳ ಮೇಲೆ ವಿಧಿಸಿರುವ ಸುಂಕದ ಕ್ರಮವನ್ನು ಸ್ವಾಗತಿಸಿದ್ದಾರೆ.
2026ರ ನಂತರದ ದಿನಗಳಲ್ಲಿ ಜಗತ್ತು ಎರಡು ಬಣಗಳಾಗಿ ವಿಭಜನೆಯಾಗುವತ್ತ ಸಾಗುತ್ತಿದ್ದು, ಪಾಕಿಸ್ತಾನದ ನೇತೃತ್ವದ ಇಸ್ಲಾಮಿಕ್ ನ್ಯಾಟೋ ದಕ್ಷಿಣ ಏಷ್ಯಾದಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡುವ ಲಕ್ಷಣಗಳು ದಟ್ಟವಾಗಿವೆ.








