ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಬಳ್ಳಾರಿ ಸಮಾವೇಶ ಮತ್ತು ಪಾದಯಾತ್ರೆ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಬರುವಷ್ಟರಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ಬದಲಾಗುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶದ ನುಸುಳುಕೋರರ ವಿಚಾರ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಬಿಜೆಪಿ ನಾಯಕರ ನಡವಳಿಕೆಗಳ ಬಗ್ಗೆ ಹರಿಹಾಯ್ದರು.
ಗಡಿ ಕಾಯುವುದು ಅಮಿತ್ ಶಾ ಕೆಲಸವೋ ಅಥವಾ ಪರಮೇಶ್ವರ್ ಅವರದ್ದೋ?
ಬಾಂಗ್ಲಾದೇಶದ ಪ್ರಜೆಗಳು ಕರ್ನಾಟಕಕ್ಕೆ ಅಕ್ರಮವಾಗಿ ನುಸುಳುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ದೇಶದ ಗಡಿ ಕಾಯುವುದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜವಾಬ್ದಾರಿಯೋ ಅಥವಾ ರಾಜ್ಯದ ಗೃಹ ಸಚಿವ ಪರಮೇಶ್ವರ್ ಅವರ ಕೆಲಸವೋ ಎಂದು ಪ್ರಶ್ನಿಸಿದರು. ಬಾಂಗ್ಲಾದೇಶದವರು ಕರ್ನಾಟಕಕ್ಕೆ ಬರಬೇಕೆಂದರೆ ಮಧ್ಯದಲ್ಲಿರುವ ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ದಾಟಿಕೊಂಡೇ ಬರಬೇಕು. ಹಾಗಾದರೆ ಆ ರಾಜ್ಯಗಳಲ್ಲಿ ಭದ್ರತೆ ಇಲ್ಲವೇ? ಗಡಿಯಲ್ಲಿ ಬಿಎಸ್ಎಫ್ ಏನು ಮಾಡುತ್ತಿದೆ? ಅಮಿತ್ ಶಾ ಅವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕೇವಲ ಒಂದೂವರೆ ಸಾವಿರ ರೂಪಾಯಿ ಕೊಟ್ಟರೆ ಬಾಂಗ್ಲಾದೇಶದವರಿಗೂ ಆಧಾರ್ ಕಾರ್ಡ್ ಸಿಗುತ್ತಿದೆ ಎಂಬ ಗಂಭೀರ ಆರೋಪವಿದೆ. ಮಹದೇವಪುರದಲ್ಲಿ ಬಿಜೆಪಿ ಮಾಜಿ ಶಾಸಕರು ಜನಜಾಗೃತಿ ಅಭಿಯಾನ ಮಾಡಿದ್ದರು. ಆದರೆ ನ್ಯಾಷನಲ್ ಚಾನೆಲ್ ಒಂದರಲ್ಲಿ ವರದಿಯಾದಂತೆ, ಬಾಂಗ್ಲಾದೇಶದವರು ಆಧಾರ್ ಕಾರ್ಡ್ ಪಡೆದು ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ವಿಚಾರದ ಬಗ್ಗೆ ಬಿಜೆಪಿ ನಾಯಕರು ಮೊದಲು ಉತ್ತರ ನೀಡಲಿ ಎಂದು ಸವಾಲು ಹಾಕಿದರು.
ಪಾದಯಾತ್ರೆ ಮಾಡುವ ತಾಕತ್ತು ಬಿಜೆಪಿಗಿಲ್ಲ
ಬಿಜೆಪಿಯ ಬಳ್ಳಾರಿ ಸಮಾವೇಶದ ಬಗ್ಗೆ ಲೇವಡಿ ಮಾಡಿದ ಖರ್ಗೆ, ಅವರಿಗೆ ಪಾದಯಾತ್ರೆ ಮಾಡಲು ಏಕೆ ಹಿಂದೇಟು? ಯಾರ ನಾಯಕತ್ವದಲ್ಲಿ ಮಾಡಬೇಕು ಎಂಬ ಗೊಂದಲವೇ ಇದಕ್ಕೆ ಕಾರಣವಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಜನರ ಪರವಾಗಿ ಪಾದಯಾತ್ರೆ ಮಾಡಿತ್ತು, ವೈಯಕ್ತಿಕ ಲಾಭಕ್ಕಲ್ಲ. ಬಳ್ಳಾರಿಯಿಂದ ಬೆಂಗಳೂರಿಗೆ ನಡೆದು ಬರುವ ಸಾಮರ್ಥ್ಯ ಬಿಜೆಪಿಗಿಲ್ಲವೇ? ಅಥವಾ ಬಹಿರಂಗವಾಗಿ ಬಳ್ಳಾರಿ ನಾಯಕರಿಗೆ ಬೆಂಬಲ ನೀಡಬಾರದು ಎಂದು ಹೈಕಮಾಂಡ್ ತೀರ್ಮಾನಿಸಿದೆಯೇ ಎಂದು ಚಾಟಿ ಬೀಸಿದರು.
ಎಲ್ಲರ ಮೇಲೂ ಕೇಸ್ ಇದೆ, ಬೇಲ್ ಮೇಲೆ ಹೊರಗಡೆ ಇದ್ದಾರೆ. ಇದನ್ನು ಹೇಗೆ ಸಮರ್ಥಿಸಿಕೊಳ್ಳುವುದು ಎಂಬ ಭಯ ಅವರಿಗಿದೆ. ವಿರೋಧ ಪಕ್ಷದ ಸಾಮರ್ಥ್ಯವನ್ನು ನಾವು ಸದನದಲ್ಲೇ ನೋಡಿದ್ದೇವೆ. ಯಾವುದೇ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ತಾಳ್ಮೆ ಅವರಿಗಿಲ್ಲ. ಒಂದು ವೇಳೆ ಅವರು ಪಾದಯಾತ್ರೆ ಆರಂಭಿಸಿದರೂ, ಅದು ಮುಗಿಯುವಷ್ಟರಲ್ಲಿ ಅವರ ರಾಜ್ಯಾಧ್ಯಕ್ಷರು ಮತ್ತು ವಿಪಕ್ಷ ನಾಯಕರು ಬದಲಾಗುವುದು ಖಚಿತ. ಹೀಗಾಗಿ ಅವರು ಪಾದಯಾತ್ರೆ ಮಾಡುವುದು ಅನುಮಾನ ಎಂದು ಭವಿಷ್ಯ ನುಡಿದರು.
ಕೇಂದ್ರದೊಂದಿಗೆ ಸಂಘರ್ಷ ಬೇಡ ಎಂಬ ಸಲಹೆಗೆ ಪ್ರತಿಕ್ರಿಯಿಸಿದ ಅವರು, ಸಂಘರ್ಷ ಮಾಡುತ್ತಿರುವುದು ನಾವಲ್ಲ, ಕೇಂದ್ರ ಸರ್ಕಾರ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ನಮ್ಮ ರಾಜ್ಯದಿಂದ ಶೇ. 40ರಷ್ಟು ಹಣ ತೆರಿಗೆ ರೂಪದಲ್ಲಿ ಹೋಗುವಾಗ, ರಾಜ್ಯಗಳ ಜೊತೆ ಕನಿಷ್ಠ ಸಮಾಲೋಚನೆ ನಡೆಸುವ ಸೌಜನ್ಯವೂ ಕೇಂದ್ರಕ್ಕಿಲ್ಲವೇ? ಸಂವಿಧಾನದ ವಿಧಿ 21, 258 ಮತ್ತು 280ರ ನೇರ ಉಲ್ಲಂಘನೆಯಾಗುತ್ತಿದೆ. ಈ ಬಗ್ಗೆ ಚರ್ಚೆ ಮಾಡುವುದು ಬೇಡವೇ? ಇದು ಕೇಂದ್ರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಯಿಯೆಂದವರಿಂದ ಸಂಸ್ಕೃತಿ ಕಲಿಯಬೇಕಿಲ್ಲ
ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂಬ ಆರೋಪಕ್ಕೆ ಕಿಡಿಕಾರಿದ ಪ್ರಿಯಾಂಕ್ ಖರ್ಗೆ, ನಾವು ಬಿಜೆಪಿಗರಿಂದ ಸಂಸ್ಕೃತಿ ಕಲಿಯಬೇಕಿಲ್ಲ. ಮುನಿರತ್ನ, ಸಿ.ಟಿ ರವಿ ಅವರು ಕೌನ್ಸಿಲ್ ನಲ್ಲಿ ಏನು ಮಾತನಾಡಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ. ಸ್ವತಃ ವಿರೋಧ ಪಕ್ಷದ ಮೇಲ್ಮನೆ ನಾಯಕರು ಚಿತ್ತಾಪುರದಲ್ಲಿ ನನಗೆ ನಾಯಿ ಎಂದು ಕರೆದಿದ್ದಾರೆ. ಇಂಥವರಿಂದ ನಾವು ಪಾಠ ಕಲಿಯಬೇಕಾ ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದರು.








