ವಾಷಿಂಗ್ಟನ್: ಜಾಗತಿಕ ರಾಜಕೀಯ ವಲಯದಲ್ಲಿ ಅಚ್ಚರಿಯ ಹಾಗೂ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಹುಕಾಲದ ಕನಸೊಂದು ವಿಶೇಷ ರೀತಿಯಲ್ಲಿ ಈಡೇರಿದಂತಾಗಿದೆ. ವೆನೆಜುವೆಲಾದ ಫೈರ್ಬ್ರ್ಯಾಂಡ್ ಎಂದೇ ಕರೆಯಲ್ಪಡುವ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಡೋ ಅವರು ತಮಗೆ ಲಭಿಸಿದ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಮರ್ಪಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಈ ಮೂಲಕ ವಿಶ್ವದ ಅತ್ಯುನ್ನತ ಗೌರವ ಎಂದು ಪರಿಗಣಿಸಲ್ಪಡುವ ನೊಬೆಲ್ ಶಾಂತಿ ಪ್ರಶಸ್ತಿಯ ಚಿನ್ನದ ಪದಕವು ಅಧಿಕೃತವಾಗಿ ಅಲ್ಲದಿದ್ದರೂ ಗೌರವ ಪೂರ್ವಕವಾಗಿ ಡೊನಾಲ್ಡ್ ಟ್ರಂಪ್ ಅವರ ಕೈಸೇರಿದಂತಾಗಿದೆ.
ಶ್ವೇತಭವನದಲ್ಲಿ ಐತಿಹಾಸಿಕ ಹಸ್ತಾಂತರ
ಅಮೆರಿಕದ ಶ್ವೇತಭವನದಲ್ಲಿ ನಡೆದ ವಿಶೇಷ ಸಮಾರಂಭವೊಂದರಲ್ಲಿ ಈ ವಿದ್ಯಮಾನ ನಡೆದಿದೆ. 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯಾಗಿರುವ ವೆನೆಜುವೆಲಾದ ಮಾರಿಯಾ ಕೊರಿನಾ ಮಚಡೋ ಅವರು ಟ್ರಂಪ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ತಮಗೆ ಸ್ಟಾಕ್ಹೋಮ್ನಲ್ಲಿ ಲಭಿಸಿದ ಮೂಲ ನೊಬೆಲ್ ಚಿನ್ನದ ಪದಕವನ್ನು ಟ್ರಂಪ್ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದ ಬಳಿಕ ಮಚಡೋ ಅವರು ಆ ಪದಕವನ್ನು ಟ್ರಂಪ್ ಅವರ ಬಳಿಯೇ ಬಿಟ್ಟು ಬಂದಿದ್ದಾರೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಕ್ಕೆ ಟ್ರಂಪ್ ಬೆಂಬಲಕ್ಕೆ ಮನ್ನಣೆ
ತಮ್ಮ ಈ ನಿರ್ಧಾರದ ಬಗ್ಗೆ ವರದಿಗಾರರೊಂದಿಗೆ ಮಾತನಾಡಿದ ಮಾರಿಯಾ ಕೊರಿನಾ ವೆನೆಜುವೆಲಾದ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕಾಗಿ ಅಮೆರಿಕ ಅಧ್ಯಕ್ಷರು ತೋರಿದ ಅಚಲ ಬದ್ಧತೆಯೇ ಈ ನಿರ್ಧಾರಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ದೇಶದ ವಿಮೋಚನೆಗಾಗಿ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಟ್ರಂಪ್ ಅವರು ನೀಡಿದ ಬೆಂಬಲ ಅನನ್ಯ. ಅವರ ಈ ವಿಶಿಷ್ಟ ಬದ್ಧತೆಗೆ ಕೃತಜ್ಞತೆಯ ಸಂಕೇತವಾಗಿ ಮತ್ತು ಅದಕ್ಕೆ ಮನ್ನಣೆ ನೀಡುವ ಸಲುವಾಗಿ ನಾನು ನನ್ನ ನೊಬೆಲ್ ಶಾಂತಿ ಪ್ರಶಸ್ತಿಯ ಪದಕವನ್ನು ಅವರಿಗೆ ಪ್ರದಾನ ಮಾಡಿದ್ದೇನೆ ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ.
ಟ್ರಂಪ್ ಪಾಲಿಗೆ ದಕ್ಕಿದ ಜಯ
ಡೊನಾಲ್ಡ್ ಟ್ರಂಪ್ ಅವರು ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕೆಂಬ ಆಸೆಯನ್ನು ಈ ಹಿಂದೆಯೇ ಹಲವು ಬಾರಿ ವ್ಯಕ್ತಪಡಿಸಿದ್ದರು. ಇದೀಗ ವೆನೆಜುವೆಲಾದ ನಾಯಕಿಯ ಮೂಲಕ ಆ ಪ್ರಶಸ್ತಿಯ ಭೌತಿಕ ಪದಕವು ಟ್ರಂಪ್ ಅವರ ಕಚೇರಿ ತಲುಪಿದೆ. ಪ್ರಶಸ್ತಿಯು ಅಧಿಕೃತವಾಗಿ ಮಚಡೋ ಅವರ ಹೆಸರಿನಲ್ಲಿದ್ದರೂ ಅದರ ಪದಕ ಈಗ ಟ್ರಂಪ್ ಅವರ ಸ್ವತ್ತಾಗಿದೆ. ರಾಜತಾಂತ್ರಿಕ ವಲಯದಲ್ಲಿ ಇದೊಂದು ಅಪರೂಪದ ವಿದ್ಯಮಾನವಾಗಿದ್ದು ವೆನೆಜುವೆಲಾ ಮತ್ತು ಅಮೆರಿಕದ ನಡುವಿನ ರಾಜಕೀಯ ಸಂಬಂಧದ ಹೊಸ ಅಧ್ಯಾಯ ಎಂದೇ ಇದನ್ನು ಬಣ್ಣಿಸಲಾಗುತ್ತಿದೆ.








