ಬೆಂಗಳೂರು: ರಾಜ್ಯದ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದ್ದ ಭಾರೀ ಭ್ರಷ್ಟಾಚಾರದ ಜಾಲವೊಂದನ್ನು ಲೋಕಾಯುಕ್ತ ಅಧಿಕಾರಿಗಳು ಬೇದಿಸಿದ್ದು, ಬರೋಬ್ಬರಿ 2 ಕೋಟಿಗೂ ಅಧಿಕ ಲಂಚಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 25 ಲಕ್ಷ ರೂಪಾಯಿ ಪಡೆಯುತ್ತಿದ್ದ ಅಬಕಾರಿ ಉಪ ಆಯುಕ್ತ (ಡಿಸಿ) ಜಗದೀಶ್ ನಾಯಕ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಕಾರ್ಯಾಚರಣೆಯು ರಾಜ್ಯ ರಾಜಧಾನಿಯಲ್ಲಿ ಸಂಚಲನ ಮೂಡಿಸಿದೆ.
ಬ್ಯಾಟರಾಯನಪುರದಲ್ಲಿರುವ ಕಚೇರಿಯಲ್ಲಿ ಶನಿವಾರ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಂಚದ ಹಣ ಸ್ವೀಕರಿಸುವಾಗಲೇ ಡಿಸಿ ಜಗದೀಶ್ ನಾಯಕ್ ಲಾಕ್ ಆಗಿದ್ದು, ಅವರಿಗೆ ಸಾಥ್ ನೀಡಿದ್ದ ಸೂಪರಿಂಟೆಂಡೆಂಟ್ ತಮ್ಮಣ್ಣ ಹಾಗೂ ಖಾಸಗಿ ವ್ಯಕ್ತಿ ಲಕ್ಕಪ್ಪ ಎಂಬುವವರನ್ನು ಕೂಡ ಬಂಧಿಸಲಾಗಿದೆ.
ಕೋಟಿ ಮೊತ್ತದ ಲಂಚಕ್ಕೆ ಡಿಮ್ಯಾಂಡ್ ಮತ್ತು ಡೀಲ್
ದೂರುದಾರರಾದ ಮಾಜಿ ಕಾರ್ಪೊರೇಟರ್ ಲಕ್ಷ್ಮೀನಾರಾಯಣ್ ಅವರು ಸಿಎಲ್-7 (CL-7) ಮತ್ತು ಮೈಕ್ರೋ ಬ್ರಿವರಿ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದರು. ನಿಯಮದಂತೆ ಸರ್ಕಾರಕ್ಕೆ ಪಾವತಿಸಬೇಕಾದ 21 ಲಕ್ಷ ರೂಪಾಯಿ ಶುಲ್ಕವನ್ನು ಅವರು ಈಗಾಗಲೇ ಪಾವತಿಸಿದ್ದರು. ಆದರೆ, ಫೈಲ್‌ಗೆ ಸಹಿ ಹಾಕಲು ಮತ್ತು ಲೈಸೆನ್ಸ್ ನೀಡಲು ಅಧಿಕಾರಿಗಳು ಬರೋಬ್ಬರಿ 2 ಕೋಟಿ 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಸಿಎಲ್-7 ಲೈಸೆನ್ಸ್‌ಗೆ 75 ಲಕ್ಷ ರೂಪಾಯಿ ಹಾಗೂ ಮೈಕ್ರೋ ಬ್ರಿವರಿ ಲೈಸೆನ್ಸ್‌ಗೆ 1.5 ಕೋಟಿ ರೂಪಾಯಿ ಸೇರಿ ಒಟ್ಟು ಮೊತ್ತವನ್ನು ಕೇಳಲಾಗಿತ್ತು. ಅಂತಿಮವಾಗಿ 2.25 ಕೋಟಿ ರೂಪಾಯಿಗೆ ಡೀಲ್ ಕುದುರಿಸಲಾಗಿತ್ತು. ಈ ಪೈಕಿ ಮುಂಗಡವಾಗಿ 25 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರ ಲಕ್ಷ್ಮೀನಾರಾಯಣ್, ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಕಿಡಿ ಕಾರಿದ್ದಾರೆ. ನಾವು ಈಗಾಗಲೇ ಸರ್ಕಾರಿ ಶುಲ್ಕ ಕಟ್ಟಿದ್ದೇವೆ. ಲೈಸೆನ್ಸ್ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯುತ್ತದೆ ಎಂದು ಹೇಳಲಾಗಿತ್ತು. ಆದರೆ, ಅಧಿಕಾರಿಗಳು ಹಳೆಯ ಮ್ಯಾನುಯಲ್ ಪದ್ಧತಿಯಲ್ಲಿಯೇ ಲಂಚಕ್ಕೆ ಪೀಡಿಸುತ್ತಿದ್ದಾರೆ. ಎರಡೂವರೆ ಕೋಟಿ ಹಣವನ್ನು ಎಲ್ಲಿಂದ ತರಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಅಧಿಕಾರಿಗಳ ಪೀಡನೆ ತಾಳಲಾರದೆ ಅವರು ಲೋಕಾಯುಕ್ತದ ಮೊರೆ ಹೋಗಿದ್ದರು.
ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳು
ದಾಳಿ ವೇಳೆ ಡಿಸಿ ಜಗದೀಶ್ ನಾಯಕ್ ಸಿಕ್ಕಿಬೀಳುತ್ತಿದ್ದಂತೆ, ಅವರೊಂದಿಗೆ ಶಾಮೀಲಾಗಿದ್ದ ಸೂಪರಿಂಟೆಂಡೆಂಟ್ ತಮ್ಮಣ್ಣ ಮತ್ತು ಮಧ್ಯವರ್ತಿ ಲಕ್ಕಪ್ಪ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದರು. ಆದರೆ, ಲೋಕಾಯುಕ್ತ ಸಿಬ್ಬಂದಿ ಅವರನ್ನು ಬೆನ್ನಟ್ಟಿ ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಗಳ ಮೇಲೂ ದಾಳಿ: ಎಸ್ ಪಿ ಶಿವಪ್ರಕಾಶ್ ದೇವರಾಜ್
ಲೋಕಾಯುಕ್ತ ಎಸ್ ಪಿ ಶಿವಪ್ರಕಾಶ್ ದೇವರಾಜ್ ಅವರು ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ (PC Act 7a) ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟು ಮೂವರ ವಿರುದ್ಧ ದೂರು ಬಂದಿದ್ದು, ಲಂಚದ ಹಣ ಸ್ವೀಕರಿಸುವಾಗ ಸಾಕ್ಷಿ ಸಮೇತ ಹಿಡಿಯಲಾಗಿದೆ. ಬಂಧಿತ ಅಧಿಕಾರಿಗಳ ಮನೆಗಳಲ್ಲೂ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆಯು ಸರ್ಕಾರಿ ಕಚೇರಿಗಳಲ್ಲಿ, ಅದರಲ್ಲೂ ಪ್ರಮುಖವಾಗಿ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಲಂಚಾವತಾರಕ್ಕೆ ಹಿಡಿದ ಕನ್ನಡಿಯಂತಿದೆ.








