ಮೈಸೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನೂ ಸಿಬಿಐ ತನಿಖೆಗೆ ನೀಡಿರಲಿಲ್ಲ. ಹೀಗಿರುವಾಗ ನಮ್ಮನ್ನು ಪ್ರಶ್ನಿಸಲು ಬಿಜೆಪಿಗೆ ಯಾವ ನೈತಿಕ ಹಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಮತ್ತು ಬಿಜೆಪಿ ನಾಯಕರ ಹೇಳಿಕೆಗಳಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದರು. ಬಿಜೆಪಿ ನಾಯಕರು ತಮ್ಮ ಅಧಿಕಾರಾವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಮೌನವಾಗಿದ್ದು, ಈಗ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ ಎಂದು ಜರಿದರು.
ಬಿಜೆಪಿಗೆ ನೈತಿಕತೆ ಎಲ್ಲಿದೆ?
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐಗೆ ವಹಿಸಿರಲಿಲ್ಲ. ಆದರೆ ನಾವು ಈ ಹಿಂದೆ ಅಧಿಕಾರದಲ್ಲಿದ್ದಾಗ ಸುಮಾರು ಏಳೆಂಟು ಪ್ರಮುಖ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆವು. ಅವರು ಅಧಿಕಾರದಲ್ಲಿದ್ದಾಗ ಕನಿಷ್ಠ ಒಂದು ಪ್ರಕರಣವನ್ನಾದರೂ ಸಿಬಿಐಗೆ ಕೊಟ್ಟಿದ್ದರೆ, ಇಂದು ನಮ್ಮನ್ನು ಪ್ರಶ್ನಿಸುವ ನೈತಿಕತೆಯಾದರೂ ಇರುತ್ತಿತ್ತು. ಅವರದ್ದೇ ತಪ್ಪುಗಳನ್ನು ಇಟ್ಟುಕೊಂಡು ನಮ್ಮನ್ನು ಕೇಳಲು ಅವರಿಗೆ ಯಾವುದೇ ಅರ್ಹತೆಯಿಲ್ಲ ಎಂದು ಸಿಎಂ ತಿರುಗೇಟು ನೀಡಿದರು.
ಬಳ್ಳಾರಿ ಚಲೋ
ಬಳ್ಳಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಡೆಸುತ್ತಿರುವ ಜನಾಂದೋಲನದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ವಿರೋಧ ಪಕ್ಷದಲ್ಲಿರುವಾಗ ಹೋರಾಟ, ಪ್ರತಿಭಟನೆಗಳನ್ನು ಮಾಡುವುದು ಅವರ ಪಕ್ಷದ ವಿಚಾರ. ಅವರು ಎಷ್ಟೇ ಆಂದೋಲನಗಳನ್ನು ಮಾಡಿದರೂ ಅದಕ್ಕೆ ತಕ್ಕ ಉತ್ತರವನ್ನು ನೀಡಲು ನಾವು ಸಿದ್ದರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರಿಗೆ ಸಂಸ್ಕೃತಿ ಇಲ್ಲ
ಕಾಂಗ್ರೆಸ್ ನಾಯಕರ ವಿರುದ್ಧ ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿ ಏಕವಚನದಲ್ಲಿ ಮಾತನಾಡಿರುವುದಕ್ಕೆ ಸಿಎಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ಮಾತುಗಳು ಬಿಜೆಪಿಯವರ ಸಂಸ್ಕೃತಿಯನ್ನು ತೋರಿಸುತ್ತದೆ. ಜನಾರ್ಧನ ರೆಡ್ಡಿ ಅವರಿಗೆ ಬಳ್ಳಾರಿಗೆ ಪ್ರವೇಶಿಸಬಾರದು ಎಂದು ನ್ಯಾಯಾಲಯ ಏಕೆ ಹೇಳಿತ್ತು? ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ವರ್ತಿಸಿದವರು ಯಾರು ಎಂಬುದನ್ನು ಜನ ಮರೆತಿಲ್ಲ. ಲೋಕಾಯುಕ್ತರಾಗಿದ್ದ ಸಂತೋಷ್ ಹೆಗಡೆ ಅವರು ತಮ್ಮ ವರದಿಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಎಂದು ಹಳೆಯ ಪ್ರಕರಣಗಳನ್ನು ನೆನಪಿಸಿದರು.
ಅಧಿವೇಶನ ಕರೆಯುವುದು ಸಂವಿಧಾನ ಬದ್ಧ
ಅಧಿವೇಶನ ಕರೆಯುವುದನ್ನು ರಾಜಕೀಯ ದುರ್ಬಳಕೆ ಎಂದು ಬಿಜೆಪಿ ಟೀಕಿಸಿರುವುದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಹೊಸ ವರ್ಷದಲ್ಲಿ ಜಂಟಿ ಅಧಿವೇಶನ ಕರೆಯಲೇಬೇಕೆಂಬುದು ಸಂವಿಧಾನದ ಸ್ಪಷ್ಟ ನಿಯಮವಾಗಿದೆ. ಅದರಂತೆಯೇ ಅಧಿವೇಶನ ಕರೆಯಲಾಗಿದೆ ಎಂದರು. ಇದೇ ವೇಳೆ, ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಉದ್ಯೋಗ ಖಾತ್ರಿ (MNREGA), ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಮತ್ತು ಆಹಾರ ಭದ್ರತಾ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಾಳು ಮಾಡಲು ಹೊರಟಿದೆ. ಇದನ್ನು ಖಂಡಿಸಲು ವಿಶೇಷ ಅಧಿವೇಶನದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ತನಿಖೆಗೆ ನಮ್ಮ ಅಡ್ಡಿಯಿಲ್ಲ
ಅಬಕಾರಿ ಇಲಾಖೆಯ ಡಿಸಿ ಮೇಲೆ ನಡೆದ ಲೋಕಾಯುಕ್ತ ದಾಳಿ ಮತ್ತು ಸಚಿವರ ಹೆಸರು ಕೇಳಿಬಂದಿರುವ ವಿಚಾರದ ಬಗ್ಗೆ ಮಾತನಾಡಿದ ಸಿಎಂ, ಕಾನೂನು ತನ್ನ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಯಾವುದೇ ಅಡ್ಡಿಪಡಿಸುವುದಿಲ್ಲ. ತಪ್ಪು ಮಾಡಿದವರು ಯಾರೇ ಆಗಿದ್ದರೂ ಕಾನೂನಿನ ಅಡಿಯಲ್ಲಿ ಕ್ರಮ ಎದುರಿಸಲಿದ್ದಾರೆ. ಇದೇ ವೇಳೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ನೇರ ಆರೋಪ ಮಾಡಿದ್ದನ್ನು ಬಿಜೆಪಿ ನಾಯಕರು ಮರೆಯಬಾರದು ಎಂದು ಟಾಂಗ್ ನೀಡಿದರು.








