ಹೊಸ ವರ್ಷದ ಆರಂಭದಲ್ಲಿ ಜಂಟಿ ಅಧಿವೇಶನವನ್ನು ಕಡ್ಡಾಯವಾಗಿ ಕರೆಯಬೇಕು ಎಂಬುದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಅದರ ಅನ್ವಯವೇ ರಾಜ್ಯ ಸರ್ಕಾರ ಈ ವಿಶೇಷ ಅಧಿವೇಶನವನ್ನು ಕರೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಜನಪರ ಯೋಜನೆಗಳು ಜಾರಿಯಾಗಿದ್ದು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಮೂಲಕ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಭದ್ರತೆ ಒದಗಿಸಲಾಗಿತ್ತು ಎಂದು ಹೇಳಿದರು. ಇದೇ ರೀತಿ ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಹಾಗೂ ಆಹಾರ ಭದ್ರತಾ ಕಾಯ್ದೆಗಳಂತಹ ಮಹತ್ವದ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಯುಪಿಎ ಸರ್ಕಾರ ದೇಶಕ್ಕೆ ನೀಡಿದೆ ಎಂದು ಸಿಎಂ ಸ್ಮರಿಸಿದರು.
ಈ ಜನಪರ ಯೋಜನೆಗಳನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿರುವುದನ್ನು ಖಂಡಿಸಲು ಈ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಎಂದು ತಿಳಿಸಿದರು. ವಿಶೇಷವಾಗಿ ಗ್ರಾಮೀಣ ಜನರಿಗೆ ಜೀವನದ ಆಸರೆಯಾಗಿರುವ ಮನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಬೇಕು ಎಂಬುದೇ ರಾಜ್ಯ ಸರ್ಕಾರದ ಪ್ರಮುಖ ಒತ್ತಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸರ್ಕಾರವು ಸಂವಿಧಾನದ ಮೌಲ್ಯಗಳು, ಜನಪರ ಹಿತಾಸಕ್ತಿಗಳು ಹಾಗೂ ಫೆಡರಲ್ ವ್ಯವಸ್ಥೆಯ ರಕ್ಷಣೆಗೆ ಸದಾ ಬದ್ಧವಾಗಿದ್ದು, ಜನರ ಹಕ್ಕುಗಳನ್ನು ಕಾಪಾಡುವ ಹೋರಾಟವನ್ನು ಮುಂದುವರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.








