ಬಾರ್ ಲೈಸೆನ್ಸ್ ನೀಡುವ ವಿಚಾರದಲ್ಲಿ ಲಂಚ ಕೇಳಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಅಬಕಾರಿ ಸಚಿವ R.B ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಕೆಯಾಗಿದೆ. ಲಕ್ಷ್ಮೀನಾರಾಯಣ ಎಂಬವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಬಾರ್ ಪರವಾನಿಗೆ ನೀಡುವ ಸಲುವಾಗಿ ಅಬಕಾರಿ ಇಲಾಖೆಯ ಡಿಸಿ ಜಗದೀಶ್ ನಾಯಕ್ ಅವರು ₹75 ಲಕ್ಷ ಲಂಚ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಲಂಚದಲ್ಲಿ ಮೊದಲ ಹಂತವಾಗಿ ₹25 ಲಕ್ಷ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ರೆಡ್ಹ್ಯಾಂಡ್ ಆಗಿ ಜಗದೀಶ್ ನಾಯಕ್ ಅವರನ್ನು ಬಂಧಿಸಿದ್ದರು.
ಈ ಘಟನೆಯ ಬೆನ್ನಲ್ಲೇ ಇದೀಗ ಅಬಕಾರಿ ಸಚಿವ R.B ತಿಮ್ಮಾಪುರ ಅವರ ಪಾತ್ರವನ್ನೂ ಪ್ರಶ್ನಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಇಲಾಖೆಯ ಉನ್ನತ ಮಟ್ಟದ ಸೂಚನೆ ಇಲ್ಲದೆ ಇಂತಹ ದೊಡ್ಡ ಮೊತ್ತದ ಲಂಚ ಬೇಡಿಕೆ ಸಾಧ್ಯವಿಲ್ಲ ಎಂಬ ಅನುಮಾನವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಈ ದೂರು ಸ್ವೀಕರಿಸಿರುವ ಲೋಕಾಯುಕ್ತ, ಪ್ರಕರಣದ ಸಮಗ್ರ ತನಿಖೆ ನಡೆಸುವ ಸಾಧ್ಯತೆ ಇದೆ. ತನಿಖೆಯಲ್ಲಿ ಸಚಿವರ ನೇರ ಅಥವಾ ಪರೋಕ್ಷ ಪಾತ್ರದ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾದಲ್ಲಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಸರ್ಕಾರಕ್ಕೆ ರಾಜಕೀಯವಾಗಿ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ.








