ಮುಂಬರುವ GBA (ಗ್ರೇಟರ್ ಬೆಂಗಳೂರು ಅಥಾರಿಟಿ) ಚುನಾವಣೆಯನ್ನು ಈ ಬಾರಿ EVM ಯಂತ್ರಗಳಿಲ್ಲದೆ, ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ರಾಜ್ಯ ಚುನಾವಣಾ ಆಯೋಗ ಮಹತ್ವದ ತೀರ್ಮಾನ ಕೈಗೊಂಡಿದೆ. ಇದರಿಂದಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಹಿಂದಿನ ಬಾರಿ ಬಳಸಿದ್ದ EVM ವ್ಯವಸ್ಥೆಗೆ ಸಂಪೂರ್ಣವಾಗಿ ಕೊಕ್ ನೀಡಲಾಗಿದೆ.
ಗಮನಾರ್ಹವಾಗಿ, ಕಳೆದ ಬಾರಿ ನಡೆದ BBMP (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್‌ಗಳನ್ನು ಬಳಸಲಾಗಿತ್ತು. ಆದರೆ ಈ ಬಾರಿ GBA ಚುನಾವಣೆಯಲ್ಲಿ ಮೇ 25ರ ನಂತರ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಮತದಾನ ಸಂಪೂರ್ಣವಾಗಿ ಬ್ಯಾಲೆಟ್ ಪೇಪರ್ ಮೂಲಕವೇ ನಡೆಯಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಈ ಸಂಬಂಧ ಉಂಟಾಗಿದ್ದ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ರಾಜ್ಯ ಚುನಾವಣಾ ಆಯೋಗ,
ನಾವು ಸ್ವತಂತ್ರ ಹಾಗೂ ಸಂವಿಧಾನಬದ್ಧ ಸಂಸ್ಥೆ. ಈ ನಿರ್ಧಾರ ಸಂಪೂರ್ಣವಾಗಿ ನಮ್ಮದೇ ಸ್ವಂತ ತೀರ್ಮಾನ ಎಂದು ಸ್ಪಷ್ಟನೆ ನೀಡಿದೆ.
EVMಗಳ ಭದ್ರತೆ, ತಾಂತ್ರಿಕ ನಂಬಿಕೆ ಹಾಗೂ ಆಡಳಿತಾತ್ಮಕ ಸುಗಮತೆಯ ಕುರಿತು ಹಲವು ಹಂತಗಳಲ್ಲಿ ಚರ್ಚೆ ನಡೆದಿದ್ದು, ಅಂತಿಮವಾಗಿ ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಬ್ಯಾಲೆಟ್ ಪೇಪರ್‌ಗಳಿಗೆ ಆದ್ಯತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ತೀರ್ಮಾನದಿಂದಾಗಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದ್ದು, ಕೆಲ ಪಕ್ಷಗಳು ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನು ಸ್ವಾಗತಿಸಿದ್ದರೆ, ಇನ್ನೂ ಕೆಲವು ತಟಸ್ಥ ನಿಲುವು ವ್ಯಕ್ತಪಡಿಸಿವೆ. ಮುಂದಿನ ದಿನಗಳಲ್ಲಿ GBA ಚುನಾವಣೆಯ ದಿನಾಂಕ ಘೋಷಣೆಯೊಂದಿಗೆ ಸ್ಪಷ್ಟ ಚಿತ್ರಣ ಹೊರಬರುವ ನಿರೀಕ್ಷೆಯಿದೆ.








