ಬಳ್ಳಾರಿ: ಇರಲಾರದೆ ಇರುವೆ ಬಿಟ್ಕೊಳೋದು ಅಂದ್ರೆ ಇದೆನಾ ಎಂಬಂತಾಗಿದೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಪರಿಸ್ಥಿತಿ. ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಗಣಿ ಜಿಲ್ಲೆ ಬಳ್ಳಾರಿಯಲ್ಲಿ, ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಶ್ರೀರಾಮುಲು ಅವರಿಗೆ ದೊಡ್ಡ ಕಾನೂನು ಸಂಕಷ್ಟವೊಂದು ಎದುರಾಗಿದೆ. ರಾಜಕೀಯ ಎದುರಾಳಿಗಳನ್ನು ಟೀಕಿಸುವ ಭರದಲ್ಲಿ ಮಾಡಿದ ಒಂದು ಎಡವಟ್ಟು, ಅವರನ್ನು ಈಗ ಪೋಕ್ಸೊ (POCSO) ಕಾಯ್ದೆಯಡಿ ಆರೋಪಿಯನ್ನಾಗಿ ಮಾಡಿದೆ. ಬಳ್ಳಾರಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಭಾಷಣದ ಜೋಶ್ ನಲ್ಲಿ ಎಡವಿದ ಶ್ರೀರಾಮುಲು
ಇತ್ತೀಚೆಗೆ ಬಳ್ಳಾರಿಯ ಎಪಿಎಂಸಿ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇದಿಕೆಯಲ್ಲಿ ಅಬ್ಬರದ ಭಾಷಣ ಮಾಡುತ್ತಿದ್ದ ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದರು. ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮತ್ತು ಡ್ರಗ್ಸ್ ಮಾಫಿಯಾ ಮಿತಿಮೀರಿದೆ ಎಂದು ಆರೋಪಿಸುವಾಗ, ಅವರ ಮಾತು ನಿಯಂತ್ರಣ ತಪ್ಪಿತು.
ನಗರದಲ್ಲಿ ಇತ್ತೀಚೆಗೆ ದೌರ್ಜನ್ಯಕ್ಕೊಳಗಾಗಿದ್ದ ಅಪ್ರಾಪ್ತ ಬಾಲಕಿಯ ಪ್ರಕರಣವನ್ನು ಪ್ರಸ್ತಾಪಿಸುವಾಗ, ಶ್ರೀರಾಮುಲು ಅವರು ಆ ಸಂತ್ರಸ್ತ ಬಾಲಕಿಯ ಹೆಸರು, ಆಕೆಯ ಜಾತಿ ಮತ್ತು ಆಕೆ ವ್ಯಾಸಂಗ ಮಾಡುತ್ತಿರುವ ಶಾಲೆಯ ಹೆಸರನ್ನು ಬಹಿರಂಗವಾಗಿ ಮೈಕ್ನಲ್ಲಿ ಕೂಗಿ ಹೇಳಿದರು. ನೂರಾರು ಜನರಿದ್ದ ಸಭೆಯಲ್ಲಿ ಮತ್ತು ಮಾಧ್ಯಮಗಳ ಎದುರೇ ಸಂತ್ರಸ್ತೆಯ ಗುರುತನ್ನು ಜಗಜ್ಜಾಹೀರು ಮಾಡಿದ್ದು ಈಗ ಕಾನೂನಿನ ಕುಣಿಕೆಯಾಗಿ ಪರಿಣಮಿಸಿದೆ.
ಕಾನೂನು ಏನು ಹೇಳುತ್ತದೆ?
ಭಾರತೀಯ ಕಾನೂನಿನ ಅನ್ವಯ, ಲೈಂಗಿಕ ದೌರ್ಜನ್ಯ ಅಥವಾ ಯಾವುದೇ ರೀತಿಯ ಶೋಷಣೆಗೆ ಒಳಗಾದ ಅಪ್ರಾಪ್ತ ಬಾಲಕಿಯ ಗುರುತನ್ನು (ಹೆಸರು, ವಿಳಾಸ, ಶಾಲೆ, ಪೋಷಕರ ವಿವರ ಇತ್ಯಾದಿ) ಯಾವುದೇ ಕಾರಣಕ್ಕೂ ಬಹಿರಂಗಪಡಿಸುವಂತಿಲ್ಲ. ಇದು ಸಂತ್ರಸ್ತೆಯ ಗೌಪ್ಯತೆ ಮತ್ತು ಘನತೆಗೆ ಧಕ್ಕೆ ತರುವ ವಿಚಾರವಾಗಿದ್ದು, ಇದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಇದಕ್ಕೆ ಕಠಿಣ ಶಿಕ್ಷೆಯ ನಿಬಂಧನೆಗಳಿವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರಾಗಿ ಶ್ರೀರಾಮುಲು ಅವರು ಈ ಸೂಕ್ಷ್ಮತೆಯನ್ನು ಮರೆತಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲು
ಶ್ರೀರಾಮುಲು ಅವರ ಭಾಷಣದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ತಕ್ಷಣವೇ ಕಾರ್ಯಪ್ರವೃತರಾಗಿದ್ದಾರೆ. ಎಪಿಎಂಸಿ ಠಾಣೆಯ ಸಿಪಿಐ ಮೊಹಮ್ಮದ್ ರಫಿಕ್ ಅವರು ನೀಡಿದ ದೂರಿನ ಮೇರೆಗೆ, ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಾಜಿ ಸಚಿವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (POCSO Act 2012) ಕಲಂ 23(1) ಮತ್ತು 23(2) ಹಾಗೂ ಬಾಲಾಪರಾಧಿ ನ್ಯಾಯ ಕಾಯ್ದೆ (JJ Act) ಸೆಕ್ಷನ್ 74 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಹಳೆ ಗಾಯದ ಮೇಲೆ ಬರೆ ಎಳೆದಂತಾದ ಹೊಸ ಕೇಸ್
ಬಳ್ಳಾರಿಯಲ್ಲಿ ಕಳೆದ ಕೆಲವು ದಿನಗಳಿಂದ ರಾಜಕೀಯ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಜನವರಿ 1 ರಂದು ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಸಂಘರ್ಷ ಹಿಂಸಾಚಾರಕ್ಕೆ ತಿರುಗಿತ್ತು. ಈ ಗಲಾಟೆಯಲ್ಲಿ ನಡೆದ ಗುಂಡಿನ ದಾಳಿಗೆ ರಾಜಶೇಖರ್ ಎಂಬ ಯುವಕ ಬಲಿಯಾಗಿದ್ದ.
ಈಗಾಗಲೇ ಆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧ ಕೊಲೆ ಯತ್ನ, ಪ್ರಚೋದನೆ ಸೇರಿದಂತೆ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಹೀಗೆ ಈಗಾಗಲೇ ಒಂದು ಕಾಲಿನ ಮೇಲೆ ನಿಂತು ಕಾನೂನು ಹೋರಾಟ ನಡೆಸಬೇಕಿರುವ ಶ್ರೀರಾಮುಲು ಅವರಿಗೆ, ಈಗ ಪೋಕ್ಸೊ ಪ್ರಕರಣ ದಾಖಲಾಗಿರುವುದು ಮತ್ತೊಂದು ದೊಡ್ಡ ಹೊಡೆತವಾಗಿದೆ.
ಒಟ್ಟಿನಲ್ಲಿ, ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋದ ಮಾಜಿ ಸಚಿವರು, ತಾವೇ ತೋಡಿದ ಹೊಂಡದಲ್ಲಿ ಬಿದ್ದಂತಾಗಿದೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.








