ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ಸ್ವೀಕರಿಸಲು ನಿರಾಕರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು ರಾಯರ ಕೋಟ್ಯಂತರ ಭಕ್ತರ ಭಾವನೆಗೆ ಘಾಸಿ ಮಾಡಿದ್ದು, ಹಿರಿಯ ನಟ ಹಾಗೂ ರಾಯರ ಪರಮ ಭಕ್ತರಾಗಿರುವ ಜಗ್ಗೇಶ್ ಅವರು ಸಿಎಂ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯರನ್ನು ಅಪಮಾನಿಸಿದವರಿಗೆ ಅಧಿಕಾರ ಅಥವಾ ಯೋಗ ಉಳಿಯುವುದಿಲ್ಲ ಎಂದು ಅವರು ನೇರವಾಗಿಯೇ ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸದಿಂದ ಕಾರಿನಲ್ಲಿ ಹೊರಬರುತ್ತಿದ್ದ ವೇಳೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಭಕ್ತಿಯಿಂದ ನೀಡಿದ ಗುರು ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ಸಿಎಂ ಅವರು ಸ್ವೀಕರಿಸದೆ ಹಿಂದಿರುಗಿಸಿದ್ದಾರೆ. ಆದರೆ, ಅದೇ ಸಮಯದಲ್ಲಿ ಮತ್ತೋರ್ವ ವ್ಯಕ್ತಿ ನೀಡಿದ ಚಾಣಕ್ಯ ನೀತಿ ಪುಸ್ತಕವನ್ನು ಪಡೆದುಕೊಂಡಿದ್ದಾರೆ. ದೇವರ ಫೋಟೋವನ್ನು ನಿರಾಕರಿಸಿ, ಪುಸ್ತಕವನ್ನು ಮಾತ್ರ ಪಡೆದ ಮುಖ್ಯಮಂತ್ರಿಗಳ ಈ ತಾರತಮ್ಯದ ನಡೆ ಭಕ್ತರ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ತಮ್ಮ ಎಕ್ಸ್ ಖಾತೆಯಲ್ಲಿ ಬೇಸರ ಹೊರಹಾಕಿರುವ ನವರಸನಾಯಕ ಜಗ್ಗೇಶ್, ಸಿಎಂ ಸಿದ್ದರಾಮಯ್ಯ ಅವರ ವರ್ತನೆಯನ್ನು ಕಟುವಾದ ಮಾತುಗಳಲ್ಲಿ ಖಂಡಿಸಿದ್ದಾರೆ. ರಾಯರ ಕೃಪೆ ನಮ್ಮ ಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತರು ಜಪ, ತಪ, ವೈರಾಗ್ಯ ಮತ್ತು ಉಪವಾಸಗಳ ಮೂಲಕ ಸೇವೆ ಸಲ್ಲಿಸುತ್ತಾರೆ. ಅಂತಹ ಪವಿತ್ರವಾದ ಪ್ರಸಾದ ಅಥವಾ ಭಾವಚಿತ್ರ ಭಕ್ತಿಯಿಂದ ಅಚಾನಕ್ ಆಗಿ ಒಬ್ಬರ ಕೈ ಸೇರಿದಾಗ ಅದನ್ನು ತಿರಸ್ಕರಿಸುವುದು ದೈವಕ್ಕೆ ಮಾಡಿದ ಅಪಮಾನ. ನನ್ನ ಜೀವಮಾನದಲ್ಲಿ ರಾಯರ ಪ್ರಸಾದವನ್ನು ಹೀಗೆ ತಿರಸ್ಕರಿಸಿದ ಪ್ರಥಮ ವ್ಯಕ್ತಿಯನ್ನು ನಾನು ನೋಡುತ್ತಿದ್ದೇನೆ ಎಂದು ಜಗ್ಗೇಶ್ ಆಘಾತ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಎಚ್ಚರಿಕೆಯ ಸಂದೇಶ ನೀಡಿರುವ ಜಗ್ಗೇಶ್, ಇತಿಹಾಸದಲ್ಲಿ ರಾಯರನ್ನು ಅಪಮಾನ ಮಾಡಿದ ಯಾವ ವ್ಯಕ್ತಿಯೂ ಉದ್ಧಾರವಾದ ನಿದರ್ಶನಗಳಿಲ್ಲ. ರಾಯರು ಇದ್ದಾರೆ, ಅವರು ಸಮಯ ಬಂದಾಗ ಎದ್ದು ಬರುತ್ತಾರೆ. ಯಾರಿಗಾದರೂ ರಾಯರ ವಿಗ್ರಹ, ಫೋಟೋ ಅಥವಾ ಮೃತ್ತಿಕೆ ಸಿಕ್ಕಾಗ ಅದನ್ನು ಭಕ್ತಿಯಿಂದ ಸ್ವೀಕರಿಸಬೇಕು. ಒಂದು ವೇಳೆ ಅಹಂಕಾರದಿಂದ ಅದನ್ನು ತಿರಸ್ಕರಿಸಿದರೆ, ಅಂತಹ ವ್ಯಕ್ತಿಯ ಯೋಗ ಅಥವಾ ಅಧಿಕಾರ ಕೊನೆಯಾಗುವ ದಿನಗಳು ಸಮೀಪಿಸಿವೆ ಎಂದೇ ಅರ್ಥ ಎಂದು ಗುಡುಗಿದ್ದಾರೆ.
ಸಿದ್ದರಾಮಯ್ಯ ಅವರ ಈ ನಡೆಯನ್ನು ರಾಯರ ಭಕ್ತವೃಂದ ಮಾತ್ರವಲ್ಲದೆ, ಸಾಮಾನ್ಯ ಜನರೂ ಟೀಕಿಸುತ್ತಿದ್ದಾರೆ. ದೇವರ ಫೋಟೋವನ್ನು ಸೌಜನ್ಯಕ್ಕಾದರೂ ಸ್ವೀಕರಿಸಬಹುದಿತ್ತು, ಅದನ್ನು ಹಿಂದಿರುಗಿಸುವ ಮೂಲಕ ಮುಖ್ಯಮಂತ್ರಿಗಳು ತಮ್ಮ ಅಹಂಕಾರ ಪ್ರದರ್ಶಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಾರೆಯಾಗಿ, ಚಾಣಕ್ಯ ನೀತಿಯನ್ನು ಒಪ್ಪಿ, ರಾಯರ ನೀತಿಯನ್ನು ತಿರಸ್ಕರಿಸಿದ ಸಿಎಂ ನಡೆಯು ಈಗ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.








