ಬೆಂಗಳೂರು: ಪೊಲೀಸ್ ಇಲಾಖೆಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಗಂಭೀರ ಆರೋಪಕ್ಕೆ ಗುರಿಯಾಗಿರುವ ಸಿಐಡಿ ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಕಚೇರಿಯಲ್ಲಿಯೇ ನಡೆದಿದೆ ಎನ್ನಲಾದ ಈ ಅಸಭ್ಯ ವರ್ತನೆಯ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿರುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ತನಿಖೆಯ ನಂತರ ಸೇವೆಯಿಂದಲೇ ವಜಾಗೊಳಿಸುವಂತಹ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡುವ ಮೂಲಕ ದೊಡ್ಡ ಶಾಕ್ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಪೊಲೀಸ್ ಇಲಾಖೆಯಂತಹ ಶಿಸ್ತಿನ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿಯಿಂದಲೇ ಇಂತಹ ಕೃತ್ಯ ನಡೆದಿರುವುದು ಇಡೀ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ಇಂತಹ ಘಟನೆಗಳು ಯಾರಿಗೂ ಗೌರವ ತರುವುದಿಲ್ಲ. ಅವರು ಎಷ್ಟೇ ದೊಡ್ಡ ಅಧಿಕಾರಿಯಾಗಿರಲಿ ಅಥವಾ ಎಷ್ಟೇ ಪ್ರಭಾವಶಾಲಿಯಾಗಿರಲಿ, ತಪ್ಪು ಮಾಡಿದವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ವಿಷಯ ತಿಳಿದು ಸಿಎಂ ಕೆಂಡಾಮಂಡಲ
ತಮ್ಮ ಅನಾರೋಗ್ಯದ ಕಾರಣದಿಂದ ನಿನ್ನೆ ವಿಶ್ರಾಂತಿಯಲ್ಲಿದ್ದೆ ಎಂದು ತಿಳಿಸಿದ ಗೃಹ ಸಚಿವರು, ಮಧ್ಯಾಹ್ನ ಊಟದ ಸಮಯದಲ್ಲಿ ಹಿರಿಯ ಅಧಿಕಾರಿಗಳು ಬಂದು ಈ ಆಘಾತಕಾರಿ ವಿಷಯವನ್ನು ತಿಳಿಸಿದರು. ತಕ್ಷಣವೇ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ವಿಷಯ ತಿಳಿದ ಮುಖ್ಯಮಂತ್ರಿಗಳು ಕೂಡ ಅತೀವ ಬೇಸರ ವ್ಯಕ್ತಪಡಿಸಿದ್ದು, ಸಿಎಂ ತುಂಬಾ ಅಪ್ಸೆಟ್ ಆಗಿದ್ದಾರೆ. ಇದು ಕೇವಲ ಪೊಲೀಸ್ ಇಲಾಖೆಗೆ ಮಾತ್ರವಲ್ಲ, ಯಾವುದೇ ಸರ್ಕಾರಿ ಇಲಾಖೆಯಲ್ಲಿಯೂ ಸಹಿಸಲು ಸಾಧ್ಯವಾಗದ ವರ್ತನೆ. ಹಾಗಾಗಿ ಅವರು ಎಷ್ಟೇ ದೊಡ್ಡವರಾಗಿದ್ದರೂ, ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಇಂತಹ ಕಠಿಣ ಸನ್ನಿವೇಶದಲ್ಲಿ ನಾವು ಕಠಿಣವಾಗಿಯೇ ವರ್ತಿಸಬೇಕಾಗುತ್ತದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಸೇವೆಯಿಂದಲೇ ವಜಾಗೊಳಿಸುವ ಎಚ್ಚರಿಕೆ
ಇದೇ ವೇಳೆ, ಆರೋಪಿ ರಾಮಚಂದ್ರ ರಾವ್ ಅವರನ್ನು ಬಂಧಿಸಬೇಕೆಂಬ ಬಿಜೆಪಿಯ ಆಗ್ರಹದ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ತಕ್ಷಣಕ್ಕೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆದರೆ ಇದು ಇಲ್ಲಿಗೆ ಮುಗಿಯುವುದಿಲ್ಲ. ಈ ಬಗ್ಗೆ ತನಿಖೆ ನಡೆಯಲಿದ್ದು, ತನಿಖಾ ವರದಿ ಬಂದ ನಂತರ ಏನು ಬೇಕಾದರೂ ಆಗಬಹುದು. ಅಗತ್ಯ ಬಿದ್ದರೆ ಅವರನ್ನು ಸೇವೆಯಿಂದಲೇ ಡಿಸ್ ಮಿಸ್ ಅಂದರೆ ವಜಾಗೊಳಿಸಲಾಗುವುದು. ಅವರು ಸೀನಿಯರ್ ಆಫೀಸರ್ ಎಂಬುವುದನ್ನು ನೋಡುವುದಿಲ್ಲ, ಯಾವ ಮುಲಾಜೂ ಇಲ್ಲ ಎಂದು ಹೇಳುವ ಮೂಲಕ ಆರೋಪಿ ಅಧಿಕಾರಿಗೆ ನಡುಕ ಹುಟ್ಟಿಸಿದ್ದಾರೆ.
ಒಟ್ಟಾರೆಯಾಗಿ, ಕಚೇರಿಯ ಪಾವಿತ್ರ್ಯತೆಯನ್ನು ಹಾಳುಗೆಡವಿ ಶಿಸ್ತಿನ ಇಲಾಖೆಗೆ ಮುಜುಗರ ಉಂಟುಮಾಡಿರುವ ಹಿರಿಯ ಐಪಿಎಸ್ ಅಧಿಕಾರಿಯ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳು ಜರುಗುವ ಲಕ್ಷಣಗಳು ದಟ್ಟವಾಗಿವೆ.








