ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಸರಣಿ ಬಸ್ ಅವಘಡಗಳು ಮತ್ತು ಅಗ್ನಿ ದುರಂತಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಖಾಸಗಿ ಬಸ್ ಮಾಲೀಕರಿಗೆ ಬಿಸಿ ಮುಟ್ಟಿಸಿದೆ. ಪ್ರಯಾಣಿಕರ ಸುರಕ್ಷತೆಯೇ ಆದ್ಯತೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸ್ಪಷ್ಟಪಡಿಸಿದ್ದು, ಇನ್ಮುಂದೆ ರಾಜ್ಯದ ಎಲ್ಲಾ ಖಾಸಗಿ ಸ್ಲೀಪರ್ ಬಸ್‌ಗಳು 8 ಹೊಸ ಕಠಿಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕೆಂದು ಆದೇಶ ಹೊರಡಿಸಿದ್ದಾರೆ.
ಖಾಸಗಿ ಬಸ್ ಮಾಲೀಕರೊಂದಿಗೆ ಮಹತ್ವದ ಸಭೆ ನಡೆಸಿದ ಸಚಿವ ರಾಮಲಿಂಗಾರೆಡ್ಡಿ, ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ (CIRT) ಮಾರ್ಗಸೂಚಿಗಳನ್ವಯ ಈ ಹೊಸ ನಿಯಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಬಸ್ ಮಾಲೀಕರು ಲಾಭದ ಜೊತೆಗೆ ಪ್ರಯಾಣಿಕರ ಜೀವ ಸುರಕ್ಷತೆಗೂ ಒತ್ತು ನೀಡಬೇಕು, ಇಲ್ಲದಿದ್ದರೆ ಶಿಸ್ತು ಕ್ರಮ ಅನಿವಾರ್ಯ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
8 ಪ್ರಮುಖ ನಿಯಮಗಳು
1. ಚಾಲಕನ ಹಿಂಬದಿ ಬಾಗಿಲು ತೆರವು: ತುರ್ತು ಸಂದರ್ಭದಲ್ಲಿ ಅಥವಾ ಅಪಘಾತದ ವೇಳೆ ಪ್ರಯಾಣಿಕರು ಹೊರಬರಲು ಅಡ್ಡಿಯಾಗುವ ಹಿನ್ನೆಲೆಯಲ್ಲಿ, ಸ್ಲೀಪರ್ ಬಸ್‌ಗಳಲ್ಲಿ ಚಾಲಕನ ಸೀಟಿನ ಹಿಂಭಾಗದಲ್ಲಿರುವ ಬಾಗಿಲನ್ನು ಕಡ್ಡಾಯವಾಗಿ ತೆಗೆದುಹಾಕಬೇಕು.
2. ಸ್ಲೀಪರ್ ಬರ್ತ್ ಸ್ಲೈಡರ್ ನಿಷೇಧ: ಬಸ್‌ನೊಳಗಿನ ಸ್ಲೀಪರ್ ಬರ್ತ್‌ಗಳಿಗೆ ಅಳವಡಿಸಲಾಗಿರುವ ಸ್ಲೈಡರ್ ಅಥವಾ ಸ್ಲೈಡಿಂಗ್ ಡೋರ್‌ಗಳನ್ನು ತೆಗೆಯಬೇಕು. ಬೆಂಕಿ ಅನಾಹುತದಂತಹ ಸಂದರ್ಭದಲ್ಲಿ ಇದು ಪ್ರಯಾಣಿಕರು ವೇಗವಾಗಿ ಹೊರಬರಲು ಅಡಚಣೆ ಉಂಟುಮಾಡುತ್ತದೆ.
3. ಫೈರ್ ಡಿಟೆಕ್ಷನ್ ಸಿಸ್ಟಮ್ ಕಡ್ಡಾಯ: ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ತಿಳಿಯುವಂತೆ ಅಡ್ವಾನ್ಸ್ಡ್ ಫೈರ್ ಡಿಟೆಕ್ಷನ್ ಅಲಾರಾಂ ಸಿಸ್ಟಮ್ ಅಳವಡಿಸುವುದು ಕಡ್ಡಾಯವಾಗಿದೆ. ಇದಕ್ಕೆ ಬಸ್ ಮಾಲೀಕರಿಗೆ ಒಂದು ತಿಂಗಳ ಗಡುವು ನೀಡಲಾಗಿದೆ.
4. ಅಗ್ನಿಶಾಮಕ ಉಪಕರಣ ಅಳವಡಿಕೆ: ಪ್ರತಿ ಸ್ಲೀಪರ್ ಬಸ್‌ನಲ್ಲಿಯೂ ಕನಿಷ್ಠ 10 ಕೆಜಿ ಸಾಮರ್ಥ್ಯದ ಅಗ್ನಿಶಾಮಕ ಸಿಲಿಂಡರ್ ಅಥವಾ ಉಪಕರಣವನ್ನು ಸುಲಭವಾಗಿ ಕೈಗೆ ಸಿಗುವಂತೆ ಅಳವಡಿಸಬೇಕು.
5. ಚಾಸಿಸ್ ವಿನ್ಯಾಸ ಬದಲಾವಣೆ ನಿಷೇಧ: ಬಸ್‌ಗಳ ಚಾಸಿಸ್ ಅನ್ನು ಅನಧಿಕೃತವಾಗಿ ವಿಸ್ತರಣೆ ಮಾಡುವುದಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ಕಂಪನಿಯಿಂದ ಬಂದ ಅಳತೆಗಿಂತ ಹೆಚ್ಚು ಉದ್ದಕ್ಕೆ ಬಸ್ ಬಾಡಿ ನಿರ್ಮಿಸುವಂತಿಲ್ಲ.
6. ಅಧಿಕೃತ ಏಜೆನ್ಸಿ ಪ್ರಮಾಣಪತ್ರ: ಬಸ್ಸುಗಳು ರಸ್ತೆಗಿಳಿಯುವ ಮುನ್ನ ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ (Approved Testing Agency) ಸುರಕ್ಷತಾ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದಿರಬೇಕು.
7. ಎಫ್‌ಸಿ ನೀಡಲು ಕಠಿಣ ಮಾನದಂಡ: ಇನ್ಮುಂದೆ ಬಸ್‌ಗಳ ಫಿಟ್‌ನೆಸ್ ಸರ್ಟಿಫಿಕೇಟ್ (FC) ನವೀಕರಣ ಮಾಡುವಾಗ ಅಧಿಕಾರಿಗಳು ಕಣ್ಣಮುಚ್ಚಿ ಸಹಿ ಹಾಕುವಂತಿಲ್ಲ. ಪ್ರಯಾಣಿಕರ ಸುರಕ್ಷತಾ ಮಾನದಂಡಗಳು ಪಾಲನೆಯಾಗಿದ್ದರೆ ಮಾತ್ರ ಎಫ್‌ಸಿ ನೀಡಲಾಗುವುದು.
8. ಬಸ್ ಬಾಡಿ ಬಿಲ್ಡರ್ಸ್ ಪರಿಶೀಲನೆ: ಬಸ್ ಬಾಡಿ ಅಥವಾ ಕವಚ ನಿರ್ಮಾಣ ಮಾಡುವ ಸಂಸ್ಥೆಯ ಸಿಂಧುತ್ವವನ್ನು ಪರಿಶೀಲಿಸಿದ ಬಳಿಕವಷ್ಟೇ ಬಸ್ ನೋಂದಣಿ (Registration) ಮಾಡಲಾಗುವುದು. ಅನಧಿಕೃತ ಗ್ಯಾರೇಜ್‌ಗಳಲ್ಲಿ ಬಾಡಿ ಕಟ್ಟಿಸಿದರೆ ನೋಂದಣಿ ಸಿಗುವುದಿಲ್ಲ.
ಈ ನಿಯಮಗಳನ್ನು ಪಾಲಿಸದ ಬಸ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ನಿಯಮ ಉಲ್ಲಂಘಿಸುವ ಬಸ್‌ಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.








