ಮೈಸೂರು: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಗುಸುಗುಸು ಕೇಳಿಬರುತ್ತಿರುವ ಬೆನ್ನಲ್ಲೇ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಈ ಭೇಟಿಯ ವೇಳೆ ಸಿಎಂ ಮಹತ್ವದ ರಾಜಕೀಯ ಸುಳಿವು ನೀಡಿದ್ದು, ರಾಜಣ್ಣ ಅವರಿಗೆ ಮತ್ತೆ ಮಂತ್ರಿಗಿರಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಸ್ವತಃ ರಾಜಣ್ಣ ಅವರ ಪುತ್ರ ರಾಜೇಂದ್ರ ಸ್ಪೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜೇಂದ್ರ, ಮುಖ್ಯಮಂತ್ರಿಗಳ ಭೇಟಿ ಹಾಗೂ ಸಂಪುಟ ಸೇರ್ಪಡೆ ಕುರಿತು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.
ಸಿಎಂ ಬಾಯಲ್ಲಿ ಸಿಹಿ ಸುದ್ದಿಯ ಮಾತು
ತುಮಕೂರಿನಲ್ಲಿ ಕಾರ್ಯಕ್ರಮವಿದ್ದ ಕಾರಣ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮನೆಗೆ ಆಗಮಿಸಿದ್ದರು. ಅವರು ತುಮಕೂರಿಗೆ ಬಂದಾಗಲೆಲ್ಲಾ ನಮ್ಮ ಮನೆಗೆ ಊಟಕ್ಕೆ ಬರುವುದು ಪದ್ಧತಿ, ಇದರಲ್ಲಿ ವಿಶೇಷವೇನಿಲ್ಲ. ಆದರೆ, ಈ ಬಾರಿಯ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಮಾಧ್ಯಮದವರು ಮತ್ತು ಅಭಿಮಾನಿಗಳು ರಾಜಣ್ಣ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುತ್ತೀರಾ ಎಂದು ಸಿಎಂ ಅವರನ್ನು ಪ್ರಶ್ನಿಸಿದಾಗ, ಮುಖ್ಯಮಂತ್ರಿಗಳು ನಸುನಗುತ್ತಲೇ ಆದಷ್ಟು ಬೇಗ ಸಿಹಿ ಸುದ್ದಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಿಎಂ ಅವರ ಈ ಮಾತು ನಮ್ಮ ಕುಟುಂಬ ಹಾಗೂ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ ಎಂದು ರಾಜೇಂದ್ರ ತಿಳಿಸಿದರು.
ಯಾವುದೇ ಹಗರಣಕ್ಕೆ ಸಿಲುಕಿ ರಾಜೀನಾಮೆ ಕೊಟ್ಟಿಲ್ಲ
ತಂದೆಯವರ ಸಚಿವ ಸ್ಥಾನದ ಆಕಾಂಕ್ಷೆಯನ್ನು ಸಮರ್ಥಿಸಿಕೊಂಡ ರಾಜೇಂದ್ರ, ರಾಜಣ್ಣ ಅವರು ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾವುದೇ ಹಗರಣ ಅಥವಾ ಭ್ರಷ್ಟಾಚಾರಕ್ಕೆ ಸಿಲುಕಿಯಲ್ಲ. ಕೆಲವೊಂದು ಕೆಲಸಗಳನ್ನು ತಪ್ಪಾಗಿ ಗ್ರಹಿಸಿದ ಕಾರಣದಿಂದ ರಾಜೀನಾಮೆ ಪಡೆಯಲಾಗಿತ್ತು ಅಷ್ಟೇ. ಅವರು ಕಳಂಕಿತರಲ್ಲ, ಹೀಗಾಗಿ ಮತ್ತೆ ಸಚಿವರಾಗುವ ಎಲ್ಲ ಅರ್ಹತೆಯೂ ಅವರಿಗಿದೆ. ನಮ್ಮ ತಂದೆ ಮತ್ತೆ ಮಂತ್ರಿಯಾಗಬೇಕು ಎಂಬುದು ಕ್ಷೇತ್ರದ ಜನರ ಹಾಗೂ ಅಭಿಮಾನಿಗಳ ಆಸೆಯಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯನವರ ಮೇಲೆ ಭಾರೀ ನಿರೀಕ್ಷೆ
ಸಿದ್ದರಾಮಯ್ಯನವರು ಕೊಟ್ಟ ಮಾತು ತಪ್ಪುವುದಿಲ್ಲ ಎಂಬ ನಂಬಿಕೆ ನಮಗಿದೆ. ಅವರ ಮೇಲೆ ನಮಗೆ ಅಪಾರವಾದ ನಿರೀಕ್ಷೆಯಿದ್ದು, ಮುಂಬರುವ ದಿನಗಳಲ್ಲಿ ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಆ ಸಿಹಿ ಸುದ್ದಿಯನ್ನು ಅಧಿಕೃತಗೊಳಿಸಲಿದ್ದಾರೆ ಎಂದು ರಾಜೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ರಾಜಣ್ಣ ಅವರ ನಿವಾಸಕ್ಕೆ ಸಿಎಂ ಭೇಟಿ ನೀಡಿರುವುದು ಮತ್ತು ಸಿಹಿ ಸುದ್ದಿ ನೀಡುವ ಭರವಸೆ ಕೊಟ್ಟಿರುವುದು ತುಮಕೂರು ಭಾಗದ ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನ ಮೂಡಿಸಿದ್ದು, ರಾಜಣ್ಣ ಅವರ ಕಮ್ ಬ್ಯಾಕ್ ಬಗ್ಗೆ ಚರ್ಚೆಗಳು ಜೋರಾಗಿವೆ.








