ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮದೇ ಆದ ವಿಶಿಷ್ಟ ಹಾಗೂ ವಿವಾದಾತ್ಮಕ ಹೇಳಿಕೆಯಿಂದ ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿದ್ದಾರೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (World Economic Forum) ಕಾರ್ಯಕ್ರಮದ ಭಾಗವಾಗಿ ಸ್ವಿಟ್ಜರ್ಲೆಂಡ್‌ನ ಸ್ವಿಸ್ ಆನ್ ರೆಸಾರ್ಟ್‌ನಲ್ಲಿ ಮಾತನಾಡಿದ ಟ್ರಂಪ್, ನಾನೊಬ್ಬ ಸರ್ವಾಧಿಕಾರಿ. ಕೆಲವೊಮ್ಮೆ ಒಂದು ದೇಶವನ್ನು ಮುನ್ನಡೆಸಲು ಸರ್ವಾಧಿಕಾರಿಯ ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ.
ಅಮೆರಿಕ ಇಂದು ಜಾಗತಿಕ ಮಟ್ಟದಲ್ಲಿ ಒಳ್ಳೆಯ ಹೆಸರು ಪಡೆದಿದೆ. ನಮ್ಮ ಆಡಳಿತಕ್ಕೆ ಉತ್ತಮ ಪ್ರತಿಕ್ರಿಯೆಗಳು ಮತ್ತು ವಿಮರ್ಶೆಗಳು ದೊರೆತಿವೆ. ಇದನ್ನು ನೋಡಿದಾಗ ನನಗೂ ಆಶ್ಚರ್ಯವಾಗುತ್ತಿದೆ. ನನಗೆ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ತಮ್ಮ ಆಡಳಿತ ಶೈಲಿ ಹಾಗೂ ನೀತಿ-ನಿರ್ಧಾರಗಳ ಬಗ್ಗೆ ಮಾತನಾಡಿದ ಟ್ರಂಪ್, ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುವುದು ಕೆಲವೊಮ್ಮೆ ಅನಿವಾರ್ಯ. ದೇಶದ ಹಿತಕ್ಕಾಗಿ ಬಲವಾದ ನಾಯಕತ್ವ ಬೇಕಾಗುತ್ತದೆ. ಅದೇ ಕಾರಣಕ್ಕೆ ನಾನು ನನ್ನ ನಿರ್ಧಾರಗಳ ಮೇಲೆ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ಟ್ರಂಪ್ ಅವರ ನಾನೊಬ್ಬ ಸರ್ವಾಧಿಕಾರಿ ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬೆಂಬಲಿಗರು ಇದನ್ನು ಬಲಿಷ್ಠ ನಾಯಕತ್ವದ ಸಂಕೇತ ಎಂದು ಹೇಳುತ್ತಿದ್ದರೆ, ವಿರೋಧ ಪಕ್ಷಗಳು ಮತ್ತು ವಿಮರ್ಶಕರು ಈ ಮಾತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ ಎಂದು ಟೀಕಿಸಿದ್ದಾರೆ.
ಈ ಹೇಳಿಕೆಯ ಮೂಲಕ ಟ್ರಂಪ್ ತಮ್ಮ ಆಡಳಿತವು ಕಠಿಣ ಆದರೆ ಫಲಪ್ರದ ಎನ್ನುವ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ದಾವೋಸ್‌ನಂತಹ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನೀಡಿದ ಈ ಹೇಳಿಕೆ ಜಾಗತಿಕ ಗಮನ ಸೆಳೆದಿದೆ.








