ಬೆಂಗಳೂರು: ರಾಜ್ಯ ವಿಧಾನಸಭೆಯ ವಿಶೇಷ ಜಂಟಿ ಅಧಿವೇಶನವು ಗುರುವಾರ ಅಕ್ಷರಶಃ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ರಾಜ್ಯಪಾಲರ ಭಾಷಣದ ವಿವಾದ, ಆಡಳಿತ ಮತ್ತು ವಿಪಕ್ಷಗಳ ನಡುವಿನ ಕೆಸರೆರಚಾಟದ ನಡುವೆಯೇ ಸ್ಪೀಕರ್ ಯು.ಟಿ.ಖಾದರ್ ಅವರು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ನೀಡಿದ ಚಮಕ್ ಈಗ ಭಾರೀ ಸುದ್ದಿಯಾಗಿದೆ.
ರಾಜ್ಯಪಾಲರ ನಡೆ ಮತ್ತು ಸದನದಲ್ಲಿ ಗದ್ದಲ
ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿರುವ ಕೆಲವು ಆಕ್ಷೇಪಾರ್ಹ ವಿಚಾರಗಳನ್ನು ಓದುವುದಿಲ್ಲ ಎಂದು ಪಟ್ಟು ಹಿಡಿದಿದ್ದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು, ಅಧಿವೇಶನಕ್ಕೆ ಆಗಮಿಸಿ ಕೇವಲ ಎರಡೇ ನಿಮಿಷಗಳಲ್ಲಿ ತಮ್ಮ ಭಾಷಣವನ್ನು ಮೊಟಕುಗೊಳಿಸಿ ಹೊರನಡೆದರು. ರಾಜ್ಯಪಾಲರ ಈ ನಡೆ ದೇಶದ ಗಮನ ಸೆಳೆದರೆ, ಸದನದೊಳಗೆ ಇದು ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಿಡಿ ಹೊತ್ತಿಸಿತು.
ಗದ್ದಲದ ನಡುವೆ ಪ್ರದೀಪ್ ಈಶ್ವರ್ ಎಂಟ್ರಿ
ಸದನದಲ್ಲಿ ಗದ್ದಲ ಮುಗಿಲು ಮುಟ್ಟಿದ್ದ ಸಂದರ್ಭದಲ್ಲಿ, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಎದ್ದು ನಿಂತು ಮಾತನಾಡಲು ಆರಂಭಿಸಿದರು. ಪದೇ ಪದೇ ಅಧ್ಯಕ್ಷರೇ… ಅಧ್ಯಕ್ಷರೇ… ಎಂದು ಪೀಠದಲ್ಲಿದ್ದ ಸ್ಪೀಕರ್ ಯು.ಟಿ.ಖಾದರ್ ಅವರ ಗಮನ ಸೆಳೆಯಲು ಯತ್ನಿಸಿದರು.
ಗದ್ದಲದ ನಡುವೆಯೇ ಪ್ರದೀಪ್ ಈಶ್ವರ್ ಅವರ ಕೂಗು ಕೇಳಿದ ಸ್ಪೀಕರ್ ಖಾದರ್, ಕೊನೆಗೂ ಅವರತ್ತ ತಿರುಗಿ ಪ್ರದೀಪ್, ನಿನ್ನದೇನು ವಿಷಯ? ಏನು ಹೇಳು ಎಂದು ಪ್ರಶ್ನಿಸಿದರು.
ಸ್ಪೀಕರ್ ಪ್ರಶ್ನೆಗೆ ಉತ್ತರಿಸಿದ ಪ್ರದೀಪ್ ಈಶ್ವರ್, ಸದನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮಾಡುತ್ತಿರುವ ಗಲಾಟೆಯನ್ನು ಪ್ರಸ್ತಾಪಿಸಿ, ವಿರೋಧ ಪಕ್ಷದವರು ವಿಪರೀತ ಗದ್ದಲ ಮಾಡುತ್ತಿದ್ದಾರೆ. ಅವರನ್ನು ನಿಯಂತ್ರಣ ಮಾಡಲು ಅವರ ಕೈಗೆ ಕಬ್ಬಿಣ ನೀಡಿ ಎಂದು ವ್ಯಂಗ್ಯವಾಗಿ ಸಲಹೆ ನೀಡಿದರು.
ತಕ್ಷಣವೇ ತಮ್ಮದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ ಸ್ಪೀಕರ್ ಯು.ಟಿ.ಖಾದರ್, ಗದ್ದಲ ಮಾಡುತ್ತಿರುವ ಅವರ ಕೈಗೆ ಕಬ್ಬಿಣ ನೀಡೋಣ, ಆದರೆ ಸುಮ್ಮನಿರದೆ ಪದೇ ಪದೇ ಎದ್ದು ನಿಲ್ಲುವ ನಿನ್ನ ಕೈಗೆ ಒಂದು ಹಗ್ಗ ನೀಡಬೇಕು ಎಂದು ಮಾರ್ಮಿಕವಾಗಿ ಟಾಂಗ್ ನೀಡಿದರು.
ಸ್ಪೀಕರ್ ಅವರ ಈ ಮಾತು ಸದನದಲ್ಲಿನ ಬಿಗುವಿನ ವಾತಾವರಣದ ನಡುವೆಯೂ ಕ್ಷಣಕಾಲ ನಗೆಯುಕ್ಕಿಸುವಂತೆ ಮಾಡಿತು. ವಿಪಕ್ಷಗಳನ್ನು ನಿಯಂತ್ರಿಸಲು ಸಲಹೆ ನೀಡಿದ ಪ್ರದೀಪ್ ಈಶ್ವರ್ ಅವರ ಅತಿಯಾದ ಉತ್ಸಾಹಕ್ಕೆ ಸ್ಪೀಕರ್ ಖಾದರ್ ಹಗ್ಗದ ಉದಾಹರಣೆ ಮೂಲಕ ಲಗಾಮು ಹಾಕಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.








