‘VB–G RAM G’ ಕಾಯ್ದೆಯ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯಗಳ ಪಟ್ಟಿಗೆ ಇದೀಗ ತಮಿಳುನಾಡು ಕೂಡ ಸೇರ್ಪಡೆಯಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ನಿರ್ಣಯವನ್ನು ಮಂಡಿಸಿದ್ದು, ಸಭೆಯಲ್ಲಿನ ಸದಸ್ಯರು ಧ್ವನಿಮತದ ಮೂಲಕ ಇದನ್ನು ಅನುಮೋದಿಸಿದ್ದಾರೆ.
ಉದ್ಯೋಗ ಖಾತರಿ ಯೋಜನೆಯಿಂದ ಮಹಾತ್ಮಾ ಗಾಂಧಿ ಹೆಸರನ್ನು ತೆಗೆದು ‘G RAM G’ ಎಂದು ಮರುನಾಮಕರಣ ಮಾಡುವ ಕೇಂದ್ರದ ಕ್ರಮವನ್ನು ಡಿಎಂಕೆ ಪಕ್ಷ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ. ಮಹಾತ್ಮಾ ಗಾಂಧಿಯ ಹೆಸರು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಆತ್ಮ ಹಾಗೂ ಮೂಲಭೂತ ತತ್ವಗಳೊಂದಿಗೆ ಆಳವಾಗಿ ಸಂಬಂಧಿಸಿದೆ. ಅವರ ಹೆಸರನ್ನು ತೆಗೆದುಹಾಕುವುದು ಯೋಜನೆಯ ಉದ್ದೇಶವನ್ನೇ ಕುಗ್ಗಿಸುವ ಕ್ರಮ ಎಂದು ಸ್ಟಾಲಿನ್ ಸರ್ಕಾರ ಅಭಿಪ್ರಾಯಪಟ್ಟಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್, ಮಹಾತ್ಮಾ ಗಾಂಧಿ ರಾಷ್ಟ್ರಪಿತ ಮತ್ತು ಸಾಮಾಜಿಕ ನ್ಯಾಯದ ಸಂಕೇತ. ಅವರ ಹೆಸರನ್ನು ತೆಗೆದು ಹಾಕುವ ಯಾವುದೇ ಪ್ರಯತ್ನವನ್ನು ತಮಿಳುನಾಡು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ನಿರ್ಣಯದ ಮೂಲಕ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬ ಸಂದೇಶವನ್ನು ತಮಿಳುನಾಡು ರವಾನಿಸಿದೆ.
ಈ ಮೊದಲು ಪಂಜಾಬ್ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಸಹ ಇದೇ ಕಾಯ್ದೆಯ ವಿರುದ್ಧ ವಿಧಾನಸಭೆಗಳಲ್ಲಿ ನಿರ್ಣಯಗಳನ್ನು ಅಂಗೀಕರಿಸಿದ್ದವು. ಇದೀಗ ತಮಿಳುನಾಡು ಕೂಡ ಆ ರಾಜ್ಯಗಳ ಸಾಲಿಗೆ ಸೇರಿದ್ದು, ಕೇಂದ್ರ ಸರ್ಕಾರದ ಮೇಲೆ ರಾಜಕೀಯ ಒತ್ತಡ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.








