ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದಾದ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಿವೆ. ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳ ಬೆನ್ನಲ್ಲೇ ಇದೀಗ ಅಬಕಾರಿ ಇಲಾಖೆಯ ಮಹಾ ಹಗರಣವೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಇದೀಗ ಸಚಿವ ಆರ್.ಬಿ. ತಿಮ್ಮಾಪುರ ಅವರ ಕುರ್ಚಿ ಅಲುಗಾಡಿಸುತ್ತಿದ್ದು, ಸರ್ಕಾರದ ಮೂರನೇ ವಿಕೆಟ್ ಪತನವಾಗಲಿದೆಯಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.
ವಿಪಕ್ಷಗಳ ಕೈಗೆ ಸಿಕ್ಕ ಬ್ರಹ್ಮಾಸ್ತ್ರ
ರಾಜ್ಯಪಾಲರ ಭಾಷಣ ಮತ್ತು ವಿ.ಬಿ.ಜಿ ರಾಮ್ ಜಿ ವಿವಾದಗಳ ನಡುವೆ ಸಿಲುಕಿದ್ದ ಸರ್ಕಾರಕ್ಕೆ, ಅಬಕಾರಿ ಇಲಾಖೆಯ ಲಂಚ ಪ್ರಕರಣ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಹಗರಣವು ನೇರವಾಗಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಸುತ್ತಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಈಗಾಗಲೇ ಸದನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಈ ವಿಚಾರವನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿದ್ದು, ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ನಿನ್ನೆ ನಡೆದ ಅಧಿವೇಶನದಲ್ಲಿ ಉಭಯ ವಿಪಕ್ಷಗಳ ನಾಯಕರು ಸದನದ ಬಾವಿಗಿಳಿದು ನಡೆಸಿದ ಧರಣಿ, ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.
ಸದನದಲ್ಲಿ ಭುಗಿಲೆದ್ದ ಆಕ್ರೋಶ
ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಆರೋಪ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಶುಕ್ರವಾರದ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿದ್ದರು. ಸಚಿವರ ರಾಜೀನಾಮೆ ಪಡೆಯಲೇಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈ ಹೋರಾಟ ಕೇವಲ ಸದನಕ್ಕೆ ಸೀಮಿತವಾಗದೆ, ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆಯನ್ನು ವಿಪಕ್ಷಗಳು ನೀಡಿವೆ.
ಮಂಗಳವಾರ ಮಹಾ ಸಂಗ್ರಾಮ ಫಿಕ್ಸ್
ವಾರಾಂತ್ಯದ ಬಿಡುವಿನ ನಂತರ ಮಂಗಳವಾರ ಸದನ ಸೇರಲಿದ್ದು, ಅಂದು ಅಬಕಾರಿ ಹಗರಣದ ಕಾವು ಮತ್ತಷ್ಟು ಏರುವ ಸಾಧ್ಯತೆಯಿದೆ. ತಿಮ್ಮಾಪುರ ಅವರ ರಾಜೀನಾಮೆ ಪಡೆಯುವವರೆಗೂ ವಿರಮಿಸುವುದಿಲ್ಲ ಎಂದು ವಿಪಕ್ಷಗಳು ಶಪಥ ಮಾಡಿವೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಬಿಜೆಪಿಯ ಮೇಲೆ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಪ್ರತ್ಯಸ್ತ್ರವಾಗಿ, ಇದೀಗ ಬಿಜೆಪಿ ಅಬಕಾರಿ ಹಗರಣವನ್ನು ಬಳಸಿಕೊಳ್ಳಲು ರಣತಂತ್ರ ರೂಪಿಸಿದೆ.
ಏನಿದು 2,500 ಕೋಟಿ ಹಗರಣದ ಆರೋಪ?
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪ್ರಕಾರ, ಅಬಕಾರಿ ಇಲಾಖೆಯಲ್ಲಿ ಬರೋಬ್ಬರಿ 2,500 ಕೋಟಿ ರೂಪಾಯಿಗಳ ಹಗರಣ ನಡೆದಿದೆ. ರಾಜ್ಯ ಸರ್ಕಾರವು ಇಲಾಖೆಗಳಿಗೆ ಆದಾಯ ಸಂಗ್ರಹದ ಗುರಿ ನಿಗದಿಪಡಿಸುವುದು ಸಾಮಾನ್ಯ. ಆದರೆ, ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ಮತ್ತು ಪರವಾನಗಿ ನವೀಕರಣಕ್ಕಾಗಿ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬುದು ಗಂಭೀರ ಆರೋಪವಾಗಿದೆ.
ವೈರಲ್ ಆಡಿಯೋ ಮತ್ತು ಲೋಕಾಯುಕ್ತ ಟ್ರ್ಯಾಪ್
ಈ ಹಗರಣಕ್ಕೆ ಪುಷ್ಠಿ ನೀಡುವಂತೆ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ, ಮಂಗಳೂರು ಅಬಕಾರಿ ಜಂಟಿ ಆಯುಕ್ತರ ಕಚೇರಿಯಲ್ಲಿ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್ ಎಂಬುವವರು ಪರವಾನಗಿ ನವೀಕರಣಕ್ಕೆ 25 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಧಿಕಾರಿಯೊಬ್ಬರು ಇಷ್ಟು ದೊಡ್ಡ ಮೊತ್ತದ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವುದು, ಇಲಾಖೆಯಲ್ಲಿನ ವ್ಯವಸ್ಥಿತ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಂತಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಮನ್‌ರೇಗಾ ವಿಚಾರ ಚರ್ಚೆಗೆ ಕರೆದ ವಿಶೇಷ ಅಧಿವೇಶನದಲ್ಲಿ ಅಬಕಾರಿ ಹಗರಣವೇ ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ. ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಸಂಪುಟದಿಂದ ವಜಾಗೊಳಿಸುತ್ತಾರೆಯೇ ಅಥವಾ ಸರ್ಕಾರ ಅವರನ್ನು ಸಮರ್ಥಿಸಿಕೊಳ್ಳಲಿದೆಯೇ ಎಂಬುದು ಮಂಗಳವಾರದ ಕಲಾಪದಲ್ಲಿ ನಿರ್ಧಾರವಾಗಲಿದೆ.








