ಹುಬ್ಬಳ್ಳಿ: ರಾಜ್ಯದ ಬಡವರ ಪಾಲಿನ ಆಶಾಕಿರಣವಾಗಿರುವ ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಆದರೆ, ವಿರೋಧ ಪಕ್ಷದವರು ನಮ್ಮ ಸಾಧನೆಗಳನ್ನು ಸಹಿಸಲಾಗದೆ ಕೇವಲ ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಸತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗೃಹಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಸಮಾರಂಭದಲ್ಲಿ ಫಲಾನುಭವಿಗಳಿಗೆ ಮನೆ ವಿತರಿಸಿ ಅವರು ಮಾತನಾಡಿದರು. ಕೊಳೆಗೇರಿ ನಿವಾಸಿಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೃಹ ಮಂಡಳಿ ನಿರ್ಮಿಸಿರುವ 42,345 ಮನೆಗಳು ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯ 46,000 ಮನೆಗಳನ್ನು ಹಸ್ತಾಂತರಿಸುವ ಮೂಲಕ ವಸತಿ ಕ್ರಾಂತಿಗೆ ಸಿಎಂ ಚಾಲನೆ ನೀಡಿದರು.
ಸರ್ಕಾರದ ಬದ್ಧತೆ
ತಾವು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಸ್ಮರಿಸಿದ ಸಿದ್ದರಾಮಯ್ಯ, ಅಂದು ನಮ್ಮ ಸರ್ಕಾರ ಬರೋಬ್ಬರಿ 14,58,000 ಮನೆಗಳನ್ನು ನಿರ್ಮಿಸಿ ಇತಿಹಾಸ ಸೃಷ್ಟಿಸಿತ್ತು. ಈಗ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ಬಳಿಕ 2024ರಲ್ಲಿ ಮೊದಲ ಹಂತದಲ್ಲಿ 36,789 ಮನೆಗಳನ್ನು ನೀಡಲಾಗಿತ್ತು. ಇದೀಗ ಎರಡನೇ ಹಂತದಲ್ಲಿ ಬಡವರ ಕನಸಿನ ಸೂರು ನನಸಾಗಿಸುವ ನಿಟ್ಟಿನಲ್ಲಿ 45 ಸಾವಿರಕ್ಕೂ ಹೆಚ್ಚು ಮನೆಗಳನ್ನು ಹಂಚಿಕೆ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳ ಮೂಲ ಉದ್ದೇಶವೇ ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಾಗಿದೆ ಎಂದು ಪ್ರತಿಪಾದಿಸಿದರು.
ಬಿಜೆಪಿ ಸುಳ್ಳಿನ ಫ್ಯಾಕ್ಟರಿ: ಸಿಎಂ ಆಕ್ರೋಶ
ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಸಿಎಂ, ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಹೇಳಿದ್ದರು. ಆದರೆ, ಯಾರ ಖಾತೆಗಾದರೂ 15 ಪೈಸೆ ಬಿತ್ತಾ? ಎಂದು ಪ್ರಶ್ನಿಸಿದರು. ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಯೋಜನೆಗಳ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ರಾಜ್ಯದ ಜನತೆಗೆ ದ್ರೋಹ ಬಗೆದಿದೆ. ಮಾತು ತಪ್ಪಿ ವಂಚನೆ ಮಾಡಿದೆ. ಇದಕ್ಕೆಲ್ಲಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ ಉತ್ತರಿಸಬೇಕು ಎಂದು ಸವಾಲು ಹಾಕಿದರು.
ಹಣ ರಾಜ್ಯದ್ದು, ಹೆಸರು ಕೇಂದ್ರದ್ದು
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟ ಮುಖ್ಯಮಂತ್ರಿಗಳು, ಒಂದು ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ 4 ರಿಂದ 5 ಲಕ್ಷ ರೂಪಾಯಿ ನೀಡುತ್ತದೆ. ಆದರೆ ಕೇಂದ್ರ ಸರ್ಕಾರ ಕೊಡುವುದು ಕೇವಲ ಒಂದು ಲಕ್ಷಕ್ಕಿಂತ ಕಡಿಮೆ. ಆದರೂ ಯೋಜನೆಯ ಹೆಸರು ಮಾತ್ರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದು ಕರೆಯಲಾಗುತ್ತದೆ. ಹಣ ನಮ್ಮದು, ಶ್ರಮ ನಮ್ಮದು, ಆದರೆ ಪ್ರಚಾರ ಮಾತ್ರ ಕೇಂದ್ರದ್ದು ಎಂದು ಕೇಂದ್ರ ಸರ್ಕಾರದ ಧೋರಣೆಯನ್ನು ಟೀಕಿಸಿದರು.
ಬೊಕ್ಕಸ ಖಾಲಿ ಎಂಬ ಸುಳ್ಳು ಪ್ರಚಾರಕ್ಕೆ ತಿರುಗೇಟು
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ಸಿಎಂ ಅಂಕಿಅಂಶಗಳ ಸಮೇತ ತಿರುಗೇಟು ನೀಡಿದರು. ನಮ್ಮ ಸರ್ಕಾರ ಬಂದ ಕೇವಲ ಎರಡು ವರ್ಷಗಳಲ್ಲಿ ವಸತಿ ಯೋಜನೆಗಾಗಿ 5,500 ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ರೈತರ ಪಂಪ್‌ಸೆಟ್‌ಗಳಿಗೆ ವಾರ್ಷಿಕ 2,500 ಕೋಟಿ ಸಬ್ಸಿಡಿ ನೀಡುತ್ತಿದ್ದೇವೆ. ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಎಲ್ಲದಕ್ಕೂ ಹಣ ಬಿಡುಗಡೆ ಮಾಡುತ್ತಿದ್ದೇವೆ. ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ, ವಿಪಕ್ಷಗಳು ಜನರ ದಿಕ್ಕು ತಪ್ಪಿಸಲು ಸುಳ್ಳು ಹಬ್ಬಿಸುತ್ತಿವೆ ಎಂದು ಕಿಡಿಕಾರಿದರು.








