ಬೆಂಗಳೂರು: ರಾಜ್ಯದ ಆಡಳಿತ ಯಂತ್ರದಲ್ಲಿ ಚುರುಕು ಮೂಡಿಸಲು ಮತ್ತು ಸಾರ್ವಜನಿಕರ ಕೆಲಸಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹಾಗೂ ಕಠಿಣ ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ರಾಜ್ಯದ ಯಾವುದೇ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ಕರೆಗಳನ್ನು ನಿರ್ಲಕ್ಷಿಸುವಂತಿಲ್ಲ. ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಕರೆ ಮಾಡಿದಾಗ ಕಡ್ಡಾಯವಾಗಿ ಸ್ವೀಕರಿಸಲೇಬೇಕು ಎಂದು ಸರ್ಕಾರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಅಧಿಕಾರಿಗಳ ವರ್ತನೆಯ ಬಗ್ಗೆ ಗಂಭೀರವಾಗಿ ಸೂಚನೆಗಳನ್ನು ನೀಡಿದೆ.
ಸಂಖ್ಯೆ ಸೇವ್ ಮಾಡಿಕೊಳ್ಳುವುದು ಕಡ್ಡಾಯ
ರಾಜ್ಯ ಸರ್ಕಾರದ ಎಲ್ಲಾ ಹಂತದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಹಾಗೂ ರಾಜ್ಯದ ವಿಧಾನಸಭಾ ಸದಸ್ಯರು, ವಿಧಾನಪರಿಷತ್ತಿನ ಸದಸ್ಯರು, ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರುಗಳ ದೂರವಾಣಿ ಸಂಖ್ಯೆಯನ್ನು ತಮ್ಮ ಮೊಬೈಲ್ ಗಳಲ್ಲಿ ಕಡ್ಡಾಯವಾಗಿ ಸೇವ್ (ಉಳಿಸಿ) ಮಾಡಿಕೊಳ್ಳಬೇಕು. ಅಪರಿಚಿತ ಸಂಖ್ಯೆ ಎಂದು ಕರೆಯನ್ನು ಕಡೆಗಣಿಸುವಂತಿಲ್ಲ.
ಮರು ಕರೆ ಮಾಡುವುದು ಅನಿವಾರ್ಯ
ಅಧಿಕಾರಿಗಳು ಕರ್ತವ್ಯದ ಮೇರೆಗೆ ಅಥವಾ ಪ್ರಮುಖ ಸಭೆಗಳಲ್ಲಿ ಇದ್ದಾಗ ಜನಪ್ರತಿನಿಧಿಗಳ ಕರೆ ಬಂದರೆ, ಸಭೆ ಮುಗಿದ ತಕ್ಷಣ ಅಥವಾ ಬಿಡುವು ಸಿಕ್ಕ ತಕ್ಷಣ ಸೌಜನ್ಯಕ್ಕಾದರೂ ಮರು ಕರೆ (Call Back) ಮಾಡಲೇಬೇಕು. ತಾವು ಅನ್ಯ ಕಾರ್ಯದಲ್ಲಿ ನಿರತರಾಗಿದ್ದ ಕಾರಣ ಕರೆಯನ್ನು ಸ್ವೀಕರಿಸಲು ಸಾಧ್ಯವಾಗಿಲ್ಲ ಎಂಬುದನ್ನು ತಿಳಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸೂಚಿಸಲಾಗಿದೆ.
ಹಿನ್ನೆಲೆ ಏನು?
ವಿಧಾನ ಪರಿಷತ್ತಿನ ಸಭಾಪತಿಯವರು ದಿನಾಂಕ 16.12.2025ರಂದು ಸರ್ಕಾರಕ್ಕೆ ಪತ್ರ ಬರೆದು ಅಧಿಕಾರಿಗಳ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಲು ಜನಪ್ರತಿನಿಧಿಗಳ ಬಳಿ ಬರುತ್ತಾರೆ. ಈ ವೇಳೆ ಸಮಸ್ಯೆ ಪರಿಹಾರಕ್ಕಾಗಿ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದಾಗ, ಹಲವು ಅಧಿಕಾರಿಗಳು ಕರೆಯನ್ನು ಸ್ವೀಕರಿಸುತ್ತಿಲ್ಲ. ಇನ್ನು ಕೆಲವರು ಕರೆ ಮಿಸ್ ಆದರೂ ಮರು ಕರೆ ಮಾಡುವ ಸೌಜನ್ಯವನ್ನೂ ತೋರುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು.
ಈ ವರ್ತನೆಯು ಸಾರ್ವಜನಿಕರ ಕೆಲಸಗಳಿಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಅಧಿಕಾರಿಗಳಿಗೆ ಈ ಖಡಕ್ ಸೂಚನೆ ನೀಡಿದೆ. ಅಲ್ಲದೆ ಈ ಆದೇಶವನ್ನು ಅಧಿಕಾರಿಗಳು ತಮ್ಮ ಆಪ್ತ ಶಾಖೆಯ ಸಿಬ್ಬಂದಿಗಳಿಗೂ ತಿಳಿಸಬೇಕು ಮತ್ತು ಚಾಚೂ ತಪ್ಪದೆ ಪಾಲಿಸಬೇಕು ಎಂದು ತಾಕೀತು ಮಾಡಲಾಗಿದೆ.
ಒಟ್ಟಾರೆಯಾಗಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವಿನ ಸಂವಹನ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವುದು ವಿಳಂಬವಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.








