ಗಜೇಂದ್ರಗಡ: ಬಡವರ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ಶೇಂಗಾ ಅಥವಾ ನೆಲಗಡಲೆ ಬೆಳೆ ಈ ಬಾರಿ ಗಜೇಂದ್ರಗಡ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಮಾರುಕಟ್ಟೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ವಿಂಟಲ್ ಶೇಂಗಾ ಧಾರಣೆ ಬರೋಬ್ಬರಿ 11 ಸಾವಿರ ರೂಪಾಯಿಗಳ ಗಡಿ ತಲುಪಿದ್ದು, ಸಾಲದ ಸುಲಿಯಲ್ಲಿ ಸಿಲುಕಿದ್ದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ.
ಈ ಹಿಂದೆ ಗೆಜ್ಜೆ ಶೇಂಗಾಕ್ಕೆ ಕ್ವಿಂಟಲ್‌ಗೆ ಗರಿಷ್ಠ ಎಂದರೆ 6,000 ರಿಂದ 8,500 ರೂಪಾಯಿಗಳವರೆಗೆ ಮಾತ್ರ ಬೆಲೆ ಸಿಗುತ್ತಿತ್ತು. ಆದರೆ, ಶನಿವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ನಡೆದ ವಹಿವಾಟಿನಲ್ಲಿ ದಿಢೀರ್ ಏರಿಕೆ ಕಂಡುಬಂದಿದ್ದು, ಕ್ವಿಂಟಲ್ ಶೇಂಗಾ ದರ 10,866 ರೂಪಾಯಿಗಳಿಗೆ ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಇದು ಈ ಎಪಿಎಂಸಿಯಲ್ಲಿ ಇಲ್ಲಿಯವರೆಗೆ ದಾಖಲಾದ ಅತ್ಯಧಿಕ ಬೆಲೆ ಎಂದು ಸ್ಥಳೀಯ ವ್ಯಾಪಾರಸ್ಥರು ದೃಢಪಡಿಸಿದ್ದಾರೆ.
ಶಾಪವಾಗಿದ್ದ ಬರ, ವರದಾನವಾದ ಮಳೆ
ಕಳೆದ ವರ್ಷ ತಾಲೂಕಿನಲ್ಲಿ ತೀವ್ರ ಬರಗಾಲ ಆವರಿಸಿತ್ತು. ಮಳೆ ಇಲ್ಲದೆ ಶೇಂಗಾ ಬೆಳೆದು ರೈತರು ಕೈಸುಟ್ಟುಕೊಂಡಿದ್ದರು, ಜಾನುವಾರುಗಳಿಗೆ ಮೇವಿಗೂ ಪರದಾಡುವ ಸ್ಥಿತಿ ಇತ್ತು. ಆದರೆ, ಈ ಬಾರಿ ವರುಣ ಕೃಪೆ ತೋರಿದ್ದಾನೆ. ನಿರೀಕ್ಷೆಗೂ ಮೀರಿ ಮಳೆಯಾಗಿದ್ದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿದ್ದು, ಭೂಮಿತಾಯಿಯೂ ಉತ್ತಮ ಫಸಲು ನೀಡಿದ್ದಾಳೆ. ಸಾಮಾನ್ಯವಾಗಿ ರೈತರಿಗೆ ಹೆಚ್ಚು ಇಳುವರಿ ಬಂದರೆ ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ, ಬೆಲೆ ಇದ್ದಾಗ ಬೆಳೆ ಇರುವುದಿಲ್ಲ. ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವ ಪರಿಸ್ಥಿತಿ ಈ ಬಾರಿ ಸುಳ್ಳಾಗಿದ್ದು, ಬಂಪರ್ ಇಳುವರಿ ಜೊತೆಗೆ ಬಂಪರ್ ಬೆಲೆ ಸಿಕ್ಕಿರುವುದು ರೈತರ ಹರ್ಷಕ್ಕೆ ಕಾರಣವಾಗಿದೆ.
ಬೆಲೆ ಏರಿಕೆಗೆ ಪ್ರಮುಖ ಕಾರಣವೇನು?
ಪ್ರಸ್ತುತ ಮಾರುಕಟ್ಟೆಗೆ ಶೇಂಗಾ ಆವಕ (Supply) ಆರಂಭಿಕ ಹಂತದಲ್ಲಿದೆ. ಮಾರುಕಟ್ಟೆಗೆ ಬರುತ್ತಿರುವ ಸರಕು ಕಡಿಮೆ ಇರುವುದರಿಂದ ಮತ್ತು ಬೇಡಿಕೆ ಹೆಚ್ಚಿರುವುದರಿಂದ ರೈತರ ಫಸಲಿಗೆ ಉತ್ತಮ ದರ ಲಭ್ಯವಾಗಿದೆ. ಆದಾಗ್ಯೂ, ಫೆಬ್ರವರಿ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶೇಂಗಾ ಮಾರುಕಟ್ಟೆಗೆ ಹರಿದು ಬರಲಿದ್ದು, ಆ ಸಮಯದಲ್ಲಿ ಇದೇ ಬೆಲೆ ಕಾಯ್ದುಕೊಳ್ಳುವುದು ಕಷ್ಟವಾಗಬಹುದು ಎಂದು ಎಪಿಎಂಸಿ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.
ಕಳೆದ 15 ವರ್ಷಗಳಿಂದ ಶೇಂಗಾ ಬೆಳೆಯುತ್ತಿದ್ದೇವೆ, ಆದರೆ ಕ್ವಿಂಟಲ್‌ಗೆ 2 ರಿಂದ 6 ಸಾವಿರ ರೂ. ಸಿಗುವುದೇ ಕಷ್ಟವಾಗಿತ್ತು. ಖರ್ಚು ಕಳೆದು ಕೈಗೆ ಸಿಗುವುದು ಏನೇನೂ ಸಾಲುತ್ತಿರಲಿಲ್ಲ. ಆದರೆ ಶನಿವಾರ ಮಾರುಕಟ್ಟೆಗೆ ತಂದಿದ್ದ ಗೆಜ್ಜೆ ಶೇಂಗಾ ಬೆಳೆಗೆ ಸಿಕ್ಕಿರುವ ಬೆಲೆ ನಮ್ಮ ಕಷ್ಟಗಳನ್ನು ದೂರ ಮಾಡುವ ಭರವಸೆ ಮೂಡಿಸಿದೆ ಎಂದು ರೈತರಾದ ಹನುಮೇಶ ಮಸಾಲಿ ಮತ್ತು ಸುರೇಶ ನಾಗರಾಳ ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಕಾಲಕಾಲೇಶ್ವರ ಗ್ರಾಮದ ರೈತರಾದ ಶಶಿಧರ ಹೂಗಾರ ಹಾಗೂ ನರಸಿಂಗ್‌ರಾವ್ ಘೋರ್ಪಡೆ, ಆರಂಭಿಕ ದಿನಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬೆಲೆ ಸಿಕ್ಕಿರುವುದು ಖುಷಿ ತಂದಿದೆ ಎಂದು ಅಭಿಪ್ರಾಯಪಟ್ಟರು.
ವ್ಯಾಪಾರಸ್ಥರ ಮಾತು
ಕೇವಲ ರೈತರಿಗಷ್ಟೇ ಅಲ್ಲ, ವ್ಯಾಪಾರಸ್ಥರಿಗೂ ಈ ಬಾರಿಯ ವಹಿವಾಟು ಉತ್ಸಾಹ ತುಂಬಿದೆ. ಕಳೆದ ಎರಡು ವರ್ಷಗಳ ಹಿಂದೆ ಗರಿಷ್ಠ 8 ಸಾವಿರದವರೆಗೂ ಇದ್ದ ಬೆಲೆ, ಏಕಾಏಕಿ 10,866 ರೂ. ಮುಟ್ಟಿರುವುದು ರೈತರ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ. ಬಿತ್ತನೆಯಿಂದ ಕಟಾವಿನವರೆಗೆ ನಾನಾ ಸಂಕಷ್ಟ ಎದುರಿಸುವ ರೈತರಿಗೆ ಈ ಬೆಲೆ ಸಮಾಧಾನ ತಂದಿದೆ ಎಂದು ವಿನಾಯಕ ಟ್ರೇಡಿಂಗ್ ಕಂಪನಿಯ ನಾಗರಾಜ ಹೊಸಗಂಡಿ ಹಾಗೂ ಭೀಮಾಂಬೀಕಾ ಟ್ರೇಡಿಂಗ್‌ನ ಜಗದೀಶ ಕಲ್ಗುಡಿ ತಿಳಿಸಿದರು.
ಒಟ್ಟಿನಲ್ಲಿ, ಗಜೇಂದ್ರಗಡ, ರೋಣ, ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕುಗಳ ರೈತರಿಗೆ ಈ ಬಾರಿಯ ಶೇಂಗಾ ಬೆಳೆ ಸಿಹಿಸುದ್ದಿ ನೀಡಿದ್ದು, ಮುಂಬರುವ ದಿನಗಳಲ್ಲಿ ಮಾರುಕಟ್ಟೆಯ ದರ ಏನಾಗಲಿದೆ ಎಂಬುದನ್ನು ಫೆಬ್ರವರಿ ತಿಂಗಳ ವಹಿವಾಟು ನಿರ್ಧರಿಸಲಿದೆ.








