ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆಹಾರ, ಬಟ್ಟೆ ಮತ್ತು ವಸತಿ ಎಷ್ಟು ಮುಖ್ಯವೋ, ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಅಥವಾ ಡಿಎಲ್ ಕೂಡ ಅಷ್ಟೇ ಅನಿವಾರ್ಯವಾಗಿದೆ. ಯುವಜನತೆಯಿಂದ ಹಿಡಿದು ವಯಸ್ಕರವರೆಗೆ ಪ್ರತಿಯೊಬ್ಬರೂ ದ್ವಿಚಕ್ರ ವಾಹನ ಅಥವಾ ಕಾರುಗಳನ್ನು ಅವಲಂಬಿಸಿದ್ದಾರೆ. ಆದರೆ ನೀವೇನಾದರೂ ವಾಹನ ಚಲಾಯಿಸುವವರಾಗಿದ್ದರೆ, ನಿಮಗೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಕೇಂದ್ರ ಸರ್ಕಾರವು ರಸ್ತೆ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಮತ್ತು ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಸಣ್ಣ ತಪ್ಪುಗಳಿಗೂ ನಿಮ್ಮ ಚಾಲನಾ ಪರವಾನಗಿ ರದ್ದಾಗುವ ಸಾಧ್ಯತೆಯಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನ ಕಾಯ್ದೆಗೆ ಮಹತ್ವದ ತಿದ್ದುಪಡಿ ತಂದಿದ್ದು, ಇದರ ಅಡಿಯಲ್ಲಿ ಚಾಲಕರು ಮಾಡುವ ತಪ್ಪುಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಮುಂದಾಗಿದೆ. ಈ ಹೊಸ ನಿಯಮದ ಪ್ರಕಾರ, ವಾಹನ ಸವಾರರು ವರ್ಷದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ಅವರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ.
ವರ್ಷದಲ್ಲಿ 5 ತಪ್ಪು ಮಾಡಿದರೆ ಏನಾಗುತ್ತೆ.?
ಹೊಸ ನಿಯಮದ ಪ್ರಕಾರ, ಒಬ್ಬ ಚಾಲಕ ಒಂದು ವರ್ಷದ ಅವಧಿಯಲ್ಲಿ 5 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ, ಅಂತಹ ಚಾಲಕರ ಲೈಸೆನ್ಸ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗುತ್ತದೆ. ಈ ಅಮಾನತು ಪ್ರಕ್ರಿಯೆಯು 3 ತಿಂಗಳ ಕಾಲ ಜಾರಿಯಲ್ಲಿರುತ್ತದೆ. ಅಂದರೆ, ನೀವು ಮೂರು ತಿಂಗಳ ಕಾಲ ಯಾವುದೇ ವಾಹನವನ್ನು ಚಲಾಯಿಸುವಂತಿಲ್ಲ. ಈ ನಿರ್ಧಾರವನ್ನು ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಅಥವಾ ಜಿಲ್ಲಾ ಸಾರಿಗೆ ಕಚೇರಿ (ಡಿಟಿಒ) ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿರುತ್ತದೆ.
ಯಾವ ತಪ್ಪುಗಳಿಗೆ ಲೈಸೆನ್ಸ್ ಕಟ್ ಆಗುತ್ತೆ
ಹಿಂದಿನ ನಿಯಮಗಳ ಪ್ರಕಾರ, ಕೇವಲ ಗಂಭೀರ ಸ್ವರೂಪದ ಅಪರಾಧಗಳಿಗೆ ಮಾತ್ರ ಲೈಸೆನ್ಸ್ ರದ್ದುಗೊಳಿಸಲಾಗುತ್ತಿತ್ತು. ಉದಾಹರಣೆಗೆ ಮದ್ಯಪಾನ ಮಾಡಿ ವಾಹನ ಚಾಲನೆ, ವೇಗದ ಮಿತಿ ಮೀರುವುದು, ಓವರ್ಲೋಡಿಂಗ್ ಅಥವಾ ಅಪಘಾತದಂತಹ ಸಂದರ್ಭಗಳಲ್ಲಿ ಮಾತ್ರ ಕಠಿಣ ಕ್ರಮವಿತ್ತು. ಆದರೆ ಈಗ ಹೊಸ ತಿದ್ದುಪಡಿಯ ಅನ್ವಯ, ಸಣ್ಣ ತಪ್ಪುಗಳನ್ನೂ ಗಂಭೀರವಾಗಿ ಪರಿಗಣಿಸಲಾಗುತ್ತದೆ.
1. ಹೆಲ್ಮೆಟ್ ಧರಿಸದಿರುವುದು
2. ಸೀಟ್ ಬೆಲ್ಟ್ ಹಾಕದಿರುವುದು
3. ಸಿಗ್ನಲ್ ಜಂಪ್ ಮಾಡುವುದು ಅಥವಾ ರೆಡ್ ಲೈಟ್ ದಾಟುವುದು
4. ಮೊಬೈಲ್ ಮಾತನಾಡುತ್ತಾ ವಾಹನ ಚಲಾಯಿಸುವುದು
5. ರಾಂಗ್ ಸೈಡ್ ಡ್ರೈವಿಂಗ್
ಈ ಮೇಲಿನ ತಪ್ಪುಗಳನ್ನು ನೀವು ವರ್ಷದಲ್ಲಿ 5 ಬಾರಿ ಮಾಡಿದರೆ ನಿಮ್ಮ ಲೈಸೆನ್ಸ್ ಅಮಾನತುಗೊಳ್ಳುವುದು ಖಚಿತ.
ತಜ್ಞರ ಅಭಿಪ್ರಾಯವೇನು
ಈ ಹೊಸ ನಿಯಮದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ದೆಹಲಿಯ ಮಾಜಿ ಉಪ ಸಾರಿಗೆ ಆಯುಕ್ತರಾದ ಅನಿಲ್ ಛಿಕಾರಾ ಅವರ ಪ್ರಕಾರ, ಇದು ಸರಿಯಾದ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆ. ಇದರಿಂದ ಪದೇ ಪದೇ ತಪ್ಪು ಮಾಡುವ ಚಾಲಕರಿಗೆ ಬಿಸಿ ಮುಟ್ಟಿಸಿದಂತಾಗುತ್ತದೆ. ಆದರೆ, ಇದನ್ನು ಜಾರಿಗೊಳಿಸಲು ಟ್ರಾಫಿಕ್ ಪೊಲೀಸರಿಗೆ ಸರಿಯಾದ ತಾಂತ್ರಿಕ ಬೆಂಬಲ ಮತ್ತು ಸಿಸಿಟಿವಿ ಕ್ಯಾಮೆರಾಗಳ ನಿಖರತೆ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದೆಡೆ, ರಸ್ತೆ ಸುರಕ್ಷತಾ ತಜ್ಞ ರೋಹಿತ್ ಬಲುಜಾ ಅವರು ಈ ನಿಯಮವನ್ನು ವಿರೋಧಿಸಿದ್ದಾರೆ. ನಮ್ಮ ರಸ್ತೆಗಳ ವಿನ್ಯಾಸವೇ ಸರಿಯಿಲ್ಲದಿರುವಾಗ ಮತ್ತು ಸಿಗ್ನಲ್ ವ್ಯವಸ್ಥೆಗಳು ದೋಷಪೂರಿತವಾಗಿರುವಾಗ, ಕೇವಲ ಚಾಲಕರನ್ನು ಗುರಿಯಾಗಿಸುವುದು ಸರಿಯಲ್ಲ. ಇದು ಭ್ರಷ್ಟಾಚಾರಕ್ಕೆ ಅಥವಾ ಪೊಲೀಸರ ಕಿರುಕುಳಕ್ಕೆ ದಾರಿಮಾಡಿಕೊಡಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಸಚಿವಾಲಯವು ಚಲನ್ ಪಾವತಿ ಪ್ರಕ್ರಿಯೆಯಲ್ಲೂ ಬದಲಾವಣೆ ತಂದಿದೆ.
ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿ ಅಥವಾ ಎಲೆಕ್ಟ್ರಾನಿಕ್ ವಿಧಾನದ ಮೂಲಕ (ಇ-ಚಲನ್) ನೀಡುವ ದಂಡವನ್ನು ಪಾವತಿಸಲು ಚಾಲಕರಿಗೆ 45 ದಿನಗಳ ಕಾಲಾವಕಾಶವಿರುತ್ತದೆ.
ಒಂದು ವೇಳೆ 45 ದಿನಗಳಲ್ಲಿ ನೀವು ಚಲನ್ ಅನ್ನು ಪ್ರಶ್ನಿಸದಿದ್ದರೆ, ನೀವು ತಪ್ಪನ್ನು ಒಪ್ಪಿಕೊಂಡಿದ್ದೀರಿ ಎಂದು ಭಾವಿಸಲಾಗುತ್ತದೆ.ನಂತರದ 30 ದಿನಗಳಲ್ಲಿ ನೀವು ಕಡ್ಡಾಯವಾಗಿ ದಂಡ ಪಾವತಿಸಬೇಕು.
ಒಂದು ವೇಳೆ ನೀವು ಚಲನ್ ಅನ್ನು ಪ್ರಶ್ನಿಸಿದರೆ, ಸಂಬಂಧಪಟ್ಟ ಅಧಿಕಾರಿಗಳು 30 ದಿನಗಳ ಒಳಗೆ ಅದನ್ನು ಇತ್ಯರ್ಥಪಡಿಸಬೇಕು. ಹಾಗೆ ಮಾಡಲು ವಿಫಲವಾದರೆ, ಆ ಚಲನ್ ತಾನಾಗಿಯೇ ರದ್ದಾಗುತ್ತದೆ.
ಒಟ್ಟಾರೆಯಾಗಿ, ವಾಹನ ಸವಾರರು ಇನ್ಮುಂದೆ ರಸ್ತೆಗೆ ಇಳಿಯುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಕೇವಲ ದಂಡ ಕಟ್ಟಿದರೆ ಸಾಲದು, ನಿಮ್ಮ ಲೈಸೆನ್ಸ್ ಕೂಡ ಸೇಫ್ ಆಗಿರಬೇಕೆಂದರೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.








