ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣವನ್ನು ಮೊಟಕುಗೊಳಿಸಿ, ರಾಷ್ಟ್ರಗೀತೆಗೂ ಕಾಯದೆ ನಿರ್ಗಮಿಸಿದ ಘಟನೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ನಡೆಯನ್ನು ಕಟುವಾಗಿ ಟೀಕಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರ ವರ್ತನೆ ಸಂವಿಧಾನ ವಿರೋಧಿಯಾಗಿದೆ. ಹೀಗಾಗಿ ಅವರನ್ನು ವಜಾ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯಪಾಲರ ನಡೆಯನ್ನು ಖಂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದರು.
ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಘೋರ ಅವಮಾನ
ರಾಜ್ಯಪಾಲರು ಸದನದಲ್ಲಿ ವರ್ತಿಸಿದ ರೀತಿ ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದ್ದಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನದ ಆರ್ಟಿಕಲ್ 176 ಮತ್ತು 163 ರ ಅಡಿಯಲ್ಲಿ ರಾಜ್ಯಪಾಲರ ಕರ್ತವ್ಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ರಾಜ್ಯಪಾಲರು ಕೇವಲ 37 ಸೆಕೆಂಡುಗಳ ಕಾಲ ಭಾಷಣ ಓದಿ, ಆತುರಾತುರವಾಗಿ ಸದನದಿಂದ ಹೊರನಡೆದರು. ಕನಿಷ್ಠಪಕ್ಷ ರಾಷ್ಟ್ರಗೀತೆ ಮುಗಿಯುವವರೆಗೂ ನಿಲ್ಲುವ ತಾಳ್ಮೆ ಅವರಿಗಿರಲಿಲ್ಲವೇ? ರಾಷ್ಟ್ರಗೀತೆಗೆ ಅವಮಾನ ಮಾಡಿದವರಿಗೆ ಏನನ್ನಬೇಕು? ಎಂದು ಖರ್ಗೆ ಪ್ರಶ್ನಿಸಿದರು. ಇಂತಹ ಸಂವಿಧಾನ ವಿರೋಧಿ ನಡೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಅವರು ದೂರಿದರು.
ಭಾಷಣದಲ್ಲಿ ವಿವಾದಾತ್ಮಕ ಅಂಶಗಳಿರಲಿಲ್ಲ
ರಾಜ್ಯಪಾಲರು ಭಾಷಣವನ್ನು ಪೂರ್ಣವಾಗಿ ಓದದಿರಲು ಕಾರಣವೇನು ಎಂದು ಪ್ರಶ್ನಿಸಿದ ಸಚಿವರು, ಸರ್ಕಾರದ ಭಾಷಣದಲ್ಲಿ ಕೇಂದ್ರದ ವಿರುದ್ಧವಾಗಲಿ ಅಥವಾ ಯಾವುದೇ ವ್ಯಕ್ತಿಗಳ ವಿರುದ್ಧವಾಗಲಿ ಅವಹೇಳನಕಾರಿ ಪದಗಳಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಮೋದಿಯವರಿಗೆ, ತಾನು ಕೇಂದ್ರ ಸಚಿವರಾದ ಸಿ.ಆರ್.ಪಾಟೀಲ್ ಮತ್ತು ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಹಾಗೂ ಸಚಿವ ಕೃಷ್ಣ ಬೈರೇಗೌಡರು ಕೇಂದ್ರಕ್ಕೆ ಬರೆದ ಪತ್ರಗಳ ನೈಜ ವಿವರಗಳಷ್ಟೇ ಅದರಲ್ಲಿತ್ತು. ರಾಜ್ಯದ ಹಿತಾಸಕ್ತಿ ಮತ್ತು ಬೇಡಿಕೆಗಳನ್ನು ಸದನದ ಮೂಲಕ ಜನರಿಗೆ ತಿಳಿಸುವುದು ತಪ್ಪೇ ಎಂದು ಅವರು ಮರುಪ್ರಶ್ನಿಸಿದರು.
ರಾಜ್ಯದ ಹಕ್ಕು ಕೇಳುವುದು ಅಪರಾಧವೇ?
ಪಂಚಾಯತ್ ರಾಜ್ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ಅಡಿಯಲ್ಲಿ ಬರಬೇಕಾದ ಅನುದಾನವನ್ನು ಕೇಳುವುದು ತಪ್ಪೇ? ವಿಬಿ-ಜಿ-ರಾಮ್ ಜೀ ಯೋಜನೆಯಡಿ ರಾಜ್ಯದ ಪಾಲನ್ನು ಶೇ.40 ರಷ್ಟು ಏಕಾಏಕಿ ನಿಗದಿಪಡಿಸಲಾಗಿದೆ. ಈ ಬಗ್ಗೆ ರಾಜ್ಯದ ಅಭಿಪ್ರಾಯವನ್ನು ಕೇಂದ್ರ ಕೇಳಿದೆಯೇ? ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ರಾಜ್ಯಪಾಲರ ಬಾಯಲ್ಲಿ ಹೇಳಿಸಬಾರದು ಎಂಬುದು ಕೇಂದ್ರದ ದುರುದ್ದೇಶವೇ ಎಂದು ಖರ್ಗೆ ಚಾಟಿ ಬೀಸಿದರು.
ಆರ್ಎಸ್ಎಸ್ ನಿರ್ದೇಶನದಂತೆ ರಾಜ್ಯಪಾಲರ ನಡೆ
ರಾಜ್ಯಪಾಲರು ಸ್ವತಂತ್ರವಾಗಿ ಕಾರ್ಯನಿರ್ವಹಿಸದೆ ಕೇಂದ್ರ ಸರ್ಕಾರ ಹಾಗೂ ಆರ್ಎಸ್ಎಸ್ ನೀಡಿದ ನಿರ್ದೇಶನದಂತೆ ವರ್ತಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದರು. ಬಿಜೆಪಿಗರಿಗೆ ಹಾಗೂ ಆರ್ಎಸ್ಎಸ್ನವರಿಗೆ ಮೂಲತಃ ರಾಷ್ಟ್ರಗೀತೆ ಮತ್ತು ಸಂವಿಧಾನದ ಮೇಲೆ ಗೌರವವಿಲ್ಲ ಎನ್ನುವುದು ಈ ಘಟನೆಯಿಂದ ಸಾಬೀತಾಗಿದೆ. ಸದನದಲ್ಲಿ ನಡೆದ ಈ ಪ್ರಹಸನಕ್ಕೆ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಗೂ ಶಾಸಕ ಶರತ್ ಬಚ್ಚೇಗೌಡ ಅವರು ಈಗಾಗಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಕೇವಲ ಕಾಂಗ್ರೆಸ್ ಪಕ್ಷದ ದನಿಯಲ್ಲ, ಸಮಸ್ತ ಕನ್ನಡಿಗರ ಪ್ರಶ್ನೆಯಾಗಿದೆ ಎಂದರು.
ಒಟ್ಟಾರೆಯಾಗಿ, ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರೇ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿರುವುದು ದುರದೃಷ್ಟಕರ. ಇಂತಹ ನಡೆಯನ್ನು ಸಹಿಸಲು ಸಾಧ್ಯವಿಲ್ಲ, ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣವೇ ಅವರನ್ನು ವಜಾಗೊಳಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.








