ಬೆಂಗಳೂರು: ನಟರಾಕ್ಷಸ ಎಂದೇ ಖ್ಯಾತರಾಗಿರುವ ಡಾಲಿ ಧನಂಜಯ್ ಅವರ ಮಾಂಸಾಹಾರ ಸೇವನೆಯ ವಿಚಾರ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಿರಿಯಾನಿ ಸೇವಿಸುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿದ್ದಂತೆ, ಧನಂಜಯ್ ಅವರ ಸಮುದಾಯ ಮತ್ತು ಜಾತಿಯನ್ನು ಉಲ್ಲೇಖಿಸಿ ಪರ-ವಿರೋಧದ ಮಾತುಗಳು ಕೇಳಿಬಂದಿದ್ದವು. ಇದೀಗ ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತಿರುವ ನಟ ಧನಂಜಯ್, ಸುದ್ದಿಗೋಷ್ಠಿ ನಡೆಸಿ ಅನಗತ್ಯ ವಿವಾದಕ್ಕೆ ತೆರೆ ಎಳೆದಿದ್ದಾರೆ.
ನಾನು ಲಿಂಗ ಧರಿಸಿ ಮಾಂಸ ತಿನ್ನಲ್ಲ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧನಂಜಯ್, ತಮ್ಮ ಮೇಲಿನ ಟೀಕೆಗಳಿಗೆ ನೇರವಾಗಿಯೇ ಉತ್ತರಿಸಿದ್ದಾರೆ. ಸಮುದಾಯದ ವಿಚಾರವನ್ನು ಪ್ರಸ್ತಾಪಿಸಿದವರಿಗೆ ಸ್ಪಷ್ಟನೆ ನೀಡಿರುವ ಅವರು, ನನಗೆ ಸಮುದ್ರ ಆಹಾರಗಳೆಂದರೆ (ಸೀ ಫುಡ್) ಇಷ್ಟ. ಆದರೆ ನಾನು ಲಿಂಗ ಧರಿಸಿ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಊಟ ಮಾಡುವಾಗ ಲಿಂಗ ತೆಗೆದಿರುತ್ತೇನೆ. ನನ್ನ ಧಾರ್ಮಿಕ ಭಾವನೆಗಳ ಬಗ್ಗೆ ನನಗೆ ಅರಿವಿದೆ. ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಆಹಾರ ನನ್ನ ವೈಯಕ್ತಿಕ ಆಯ್ಕೆ
ನನ್ನ ಆಹಾರ ಪದ್ಧತಿಯ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವುದು ನನಗೆ ತೀವ್ರ ಮುಜುಗರ ಮತ್ತು ಬೇಸರ ತಂದಿದೆ. ನಾನು ಗೆಳೆಯನ ಹೋಟೆಲ್ ಉದ್ಘಾಟನೆಗೆ ಹೋಗಿದ್ದೆ, ಅಲ್ಲಿ ಪ್ರೀತಿಯಿಂದ ಬಿರಿಯಾನಿ ತಿಂದು ಬಂದೆ. ನಾನೇ ಸ್ವತಃ 10-15 ಬಿರಿಯಾನಿ ಶಾಪ್ ಉದ್ಘಾಟನೆ ಮಾಡಿದ್ದೇನೆ. ಆದರೆ ಈ ಬಾರಿ ಅದನ್ನೇ ದೊಡ್ಡ ವಿವಾದ ಮಾಡಲಾಯಿತು. ನಾನು ಆಗಾಗ ಪಾರ್ಟಿ ಮಾಡುತ್ತೇನೆ, ಅದು ನನ್ನ ವೈಯಕ್ತಿಕ ವಿಚಾರ. ಹಿಂದೆ ಧೂಮಪಾನ ಮಾಡುತ್ತಿದ್ದೆ, ಈಗ ಅದನ್ನು ಬಿಟ್ಟಿದ್ದೇನೆ. ನನ್ನ ಆಹಾರ ಮತ್ತು ನನ್ನ ಜೀವನಶೈಲಿ ನನ್ನ ಆಯ್ಕೆಯೇ ಹೊರತು, ಸಮಾಜದ ಚರ್ಚೆಯ ವಸ್ತುವಾಗಬಾರದು ಎಂದು ಡಾಲಿ ಖಡಕ್ ಆಗಿ ನುಡಿದಿದ್ದಾರೆ.
ಜಾತಿ ಮತ್ತು ಕಲಾವಿದರನ್ನು ಎಳೆತಂದಿದ್ದಕ್ಕೆ ಬೇಸರ
ಕೇವಲ ಒಬ್ಬ ನಟ ಮಾಂಸಾಹಾರ ಸೇವಿಸಿದ ಎಂಬ ಕಾರಣಕ್ಕೆ ಇಡೀ ಸಮುದಾಯವನ್ನು, ಜಾತಿಯನ್ನು ಮತ್ತು ಬೇರೆ ಕಲಾವಿದರನ್ನು ಈ ವಿಷಯಕ್ಕೆ ಎಳೆದು ತಂದಿರುವುದು ನನಗೆ ತುಂಬಾ ನೋವು ತಂದಿದೆ. ಡಾಲಿ ಧನಂಜಯ್ ನಾನ್ ವೆಜ್ ತಿನ್ನುತ್ತಾನೆ ಎಂದರೆ ಒಪ್ಪಿಕೊಳ್ಳಬಹುದು. ಆದರೆ ಅದರ ನಡುವೆ ಜಾತಿ ನಿಂದನೆ ಮಾಡುವುದು, ಸಮುದಾಯವನ್ನು ಅವಮಾನಿಸುವುದು ತಪ್ಪು. ಬಡವರ ಮಕ್ಕಳು ಬೆಳೆಯಬೇಕು ಎಂಬ ನನ್ನ ಹೇಳಿಕೆಯನ್ನು ಜನ ತಮಗಿಷ್ಟ ಬಂದಂತೆ ಬದಲಾಯಿಸಿ ಮಾತನಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಿನಿಮಾ ಬಗ್ಗೆ ಚರ್ಚೆಯಾಗಲಿ, ಊಟದ ಬಗ್ಗೆ ಅಲ್ಲ
ನಾನು ಚಿತ್ರರಂಗಕ್ಕೆ ಬಂದು ಸ್ವಂತ ಪ್ರೊಡಕ್ಷನ್ ಹೌಸ್ ತೆರೆದು, ಉತ್ತಮ ಸಿನಿಮಾಗಳನ್ನು ಕೊಡಲು ಹಗಲಿರುಳು ಶ್ರಮಿಸುತ್ತಿದ್ದೇನೆ. ನಾನೇನು ನೂರಾರು ಕೋಟಿ ಒಡೆಯನಲ್ಲ, ಸಿನಿಮಾಕ್ಕಾಗಿ ಇಂದಿಗೂ ಒದ್ದಾಡುತ್ತಿದ್ದೇನೆ. ನಾನು ಇಂಡಸ್ಟ್ರಿಗಾಗಿ ಮಾಡುತ್ತಿರುವ ಕೆಲಸಗಳ ಬಗ್ಗೆ, ನನ್ನ ಸಿನಿಮಾಗಳ ಬಗ್ಗೆ ಚರ್ಚೆಯಾಗಬೇಕು. ಅದನ್ನು ಬಿಟ್ಟು ನಾನು ಏನು ಊಟ ಮಾಡಿದೆ ಎಂಬುದು ಚರ್ಚೆಯ ವಿಷಯವಾಗಬಾರದು. ನಾವು ಸಂಬಂಧಗಳನ್ನು ಸೆಲೆಬ್ರೇಟ್ ಮಾಡೋಣ ಎಂದು ಎಲ್ಲೆಡೆ ಹೇಳುತ್ತಿದ್ದೇನೆ. ದಯವಿಟ್ಟು ಅನಗತ್ಯ ವಿವಾದಗಳನ್ನು ನಿಲ್ಲಿಸಿ ಎಂದು ಧನಂಜಯ್ ಮನವಿ ಮಾಡಿಕೊಂಡರು.








