ಬೆಂಗಳೂರು: ರಾಜ್ಯ ವಿಧಾನಸಭೆಯ ಅಧಿವೇಶನ ಶುಕ್ರವಾರ ಬಳ್ಳಾರಿ ರಾಜಕೀಯದ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತು. ಬಳ್ಳಾರಿ ಗಲಾಟೆ ವಿಚಾರವಾಗಿ ನಡೆದ ಚರ್ಚೆ ತಾರಕಕ್ಕೇರಿ, ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಅವರ ನಡುವೆ ರಣರೋಚಕ ವಾಗ್ಯುದ್ಧಕ್ಕೆ ಸಾಕ್ಷಿಯಾಯಿತು. ವಾಲ್ಮೀಕಿ ಸಮಾಜದ ನಾಯಕತ್ವದ ವಿಚಾರದಲ್ಲಿ ನಡೆದ ಜಟಾಪಟಿಯಲ್ಲಿ, ನೂರು ಜನ್ಮ ಎತ್ತಿ ಬಂದರೂ ನೀನು ಶ್ರೀರಾಮುಲು ಮುಂದೆ ನಾಯಕನಾಗಲು ಸಾಧ್ಯವಿಲ್ಲ ಎಂದು ಜನಾರ್ದನ ರೆಡ್ಡಿ ಗುಡುಗಿದರೆ, ಅಷ್ಟೇ ಆಕ್ರೋಶದಿಂದ ನಾಗೇಂದ್ರ ಸವಾಲು ಸ್ವೀಕರಿಸಿದರು.
ಸದನದಲ್ಲಿ ಬಳ್ಳಾರಿ ಗಲಾಟೆ ಕುರಿತು ಮಾತನಾಡಿದ್ದ ಜನಾರ್ದನ ರೆಡ್ಡಿ, ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು ಹಾಗೂ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ ಶುಕ್ರವಾರ ಸ್ಪಷ್ಟನೆ ನೀಡಲು ಮುಂದಾದ ಬಿ.ನಾಗೇಂದ್ರ, ಬಿಜೆಪಿ ಹಾಗೂ ಜನಾರ್ದನ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಮಾತು ಮಿತಿ ಮೀರಿ ವೈಯಕ್ತಿಕ ಸವಾಲುಗಳ ಹಂತಕ್ಕೆ ತಲುಪಿತು.
ನಾಗೇಂದ್ರ ಅವರ ಮಾತುಗಳಿಂದ ಕೆರಳಿದ ಜನಾರ್ದನ ರೆಡ್ಡಿ, ಏರು ಧ್ವನಿಯಲ್ಲಿ ನಾಗೇಂದ್ರ ವಿರುದ್ಧ ಹರಿಹಾಯ್ದರು. ವಾಲ್ಮೀಕಿ ಸಮಾಜದಲ್ಲಿ ಶ್ರೀರಾಮುಲು ಅವರು ಪ್ರಶ್ನಾತೀತ ನಾಯಕ. ಅವರ ಮುಂದೆ ನೀನು ಎಂದು ನಾಯಕನಾಗಲು ಸಾಧ್ಯವಿಲ್ಲ. ನೂರು ಜನ್ಮ ಹುಟ್ಟಿ ಬಂದರೂ ನೀನು ಲೀಡರ್ ಆಗೋಕೆ ಆಗಲ್ಲ ಎಂದು ನೇರ ಸವಾಲು ಹಾಕಿದರು. ರೆಡ್ಡಿ ಅವರ ಈ ಮಾತು ಸದನದಲ್ಲಿ ಸಂಚಲನ ಮೂಡಿಸಿತು.
ಮೇಜು ಕುಟ್ಟಿ ಸವಾಲು ಸ್ವೀಕರಿಸಿದ ನಾಗೇಂದ್ರ
ಜನಾರ್ದನ ರೆಡ್ಡಿ ಅವರ ಸವಾಲಿಗೆ ಜಗ್ಗದ ನಾಗೇಂದ್ರ, ಆಕ್ರೋಶಭರಿತರಾಗಿ ಮೇಜು ಕುಟ್ಟಿ ತಿರುಗೇಟು ನೀಡಿದರು. ವಾಲ್ಮೀಕಿ ಸಮಾಜ ನಮ್ಮ ಸಮಾಜ. ನಮ್ಮ ಸಮಾಜದ ಜನ ನಮ್ಮ ಜೊತೆಗೆ ಗಟ್ಟಿಯಾಗಿ ನಿಂತಿದ್ದಾರೆ. ನಿಮ್ಮ ಸವಾಲನ್ನು ನಾನು ಸ್ವೀಕರಿಸುತ್ತೇನೆ ಎಂದು ಆರ್ಭಟಿಸಿದರು.
ವಾಗ್ವಾದದ ಕಾವಿನಲ್ಲೇ ಬಳ್ಳಾರಿ ಗಲಾಟೆಯ ಗಂಭೀರ ವಿಚಾರಗಳು ಪ್ರಸ್ತಾಪವಾದವು. ಗಲಾಟೆಯ ಸಂದರ್ಭದಲ್ಲಿ ಪೆಟ್ರೋಲ್ ಬಾಂಬ್ ಹಾಕಲು ಮುಂದಾಗಿದ್ದರು. ನಿಮ್ಮ ಪಕ್ಷದ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ. ಆದರೂ ನೀನು ಅದನ್ನೇ ಸಮರ್ಥನೆ ಮಾಡಿಕೊಳ್ಳುತ್ತಿಯಾ ಎಂದರೆ ಹೇಗೆ ಎಂದು ರೆಡ್ಡಿ ಪ್ರಶ್ನಿಸಿದರು.
ಇದಕ್ಕೆ ತೀಕ್ಷ್ಣವಾಗಿಯೇ ಉತ್ತರಿಸಿದ ನಾಗೇಂದ್ರ, ಅಲ್ಲಿ ವಾಲ್ಮೀಕಿ ಭಾವಚಿತ್ರವಿದ್ದ ಬ್ಯಾನರ್ ಅನ್ನು ಕೆಳಗೆ ಹಾಕಿ ತುಳಿದಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಮಹರ್ಷಿ ವಾಲ್ಮೀಕಿಗೆ ಅಪಮಾನ ಮಾಡಿದ್ದನ್ನು ಸಹಿಸಲು ಸಾಧ್ಯವಿಲ್ಲ. ನನ್ನನ್ನು ರಾಜಕೀಯವಾಗಿ ಸೋಲಿಸುವುದು, ಬಿಡುವುದು ಇದ್ದೇ ಇರುತ್ತದೆ. ಆದರೆ ನಮ್ಮ ಸಮಾಜದ ಪರವಾದ ಹೋರಾಟ ನಿಲ್ಲುವುದಿಲ್ಲ. ರೆಡ್ಡಿಯವರ ಎಲ್ಲ ಚಾಲೆಂಜ್ ಗಳನ್ನೂ ನಾವು ಸ್ವಾಗತ ಮಾಡುತ್ತೇವೆ ಎಂದು ಘೋಷಿಸಿದರು.
ಉಭಯ ನಾಯಕರ ನಡುವಿನ ಮಾತಿನ ಚಕಮಕಿ ನಿಯಂತ್ರಣ ಮೀರಿ ಹೋಗಿದ್ದನ್ನು ಕಂಡ ಸ್ಪೀಕರ್ ಯು.ಟಿ ಖಾದರ್, ಸದನವನ್ನು ಹತೋಟಿಗೆ ತರಲು ಹರಸಾಹಸ ಪಡಬೇಕಾಯಿತು. ಪರಿಸ್ಥಿತಿ ತಿಳಿಯಾಗದಿದ್ದಾಗ, ಸ್ಪೀಕರ್ ಖಾದರ್ ಅವರು ಹಿರಿಯ ಬಿಜೆಪಿ ನಾಯಕ ಸುನೀಲ್ ಕುಮಾರ್ ಅವರಿಗೆ ಮನವಿ ಮಾಡಿ, ಜನಾರ್ದನ ರೆಡ್ಡಿ ಅವರನ್ನು ಸಮಾಧಾನಪಡಿಸುವಂತೆ ಸೂಚಿಸಬೇಕಾಯಿತು.
ಒಟ್ಟಾರೆಯಾಗಿ, ಬಳ್ಳಾರಿಯ ಬೀದಿಯಲ್ಲಿ ನಡೆದ ಗಲಾಟೆ ವಿಧಾನಸಭೆಯ ಒಳಗೆ ಪ್ರತಿಧ್ವನಿಸಿದ್ದು, ಜನಾರ್ದನ ರೆಡ್ಡಿ ಮತ್ತು ನಾಗೇಂದ್ರ ನಡುವಿನ ರಾಜಕೀಯ ವೈಷಮ್ಯ ತಾರಕಕ್ಕೇರಿರುವುದಕ್ಕೆ ಈ ಘಟನೆ ಸಾಕ್ಷಿಯಾಯಿತು.








