ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು (4 Labour Codes) ರದ್ದುಗೊಳಿಸಬೇಕು ಎಂಬ ಒತ್ತಾಯದೊಂದಿಗೆ ಫೆಬ್ರವರಿ 12ರಂದು ದೇಶವ್ಯಾಪಿ ಮುಷ್ಕರ (Bharat Bandh) ನಡೆಸಲು ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ. ಈ ಮುಷ್ಕರಕ್ಕೆ ಇದೀಗ ಬ್ಯಾಂಕ್ ಉದ್ಯೋಗಿ ಸಂಘಟನೆಗಳೂ ಅಧಿಕೃತ ಬೆಂಬಲ ಘೋಷಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
AIBEA, AIBOA ಮತ್ತು BEFI ಸಂಘಟನೆಗಳು ಕಾರ್ಮಿಕ ಸಂಘಟನೆಗಳ ಜೊತೆ ಕೈಜೋಡಿಸಿ, ಮುಷ್ಕರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ತೀರ್ಮಾನಿಸಿವೆ. ಫೆ.12ರಂದು ಯಾವುದೇ ಬ್ಯಾಂಕ್ ಉದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗಬಾರದು ಎಂದು ಈ ಸಂಘಟನೆಗಳು ಕರೆ ನೀಡಿದ್ದಾರೆ.
ಈ ಹಿನ್ನೆಲೆ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳ ಕಾರ್ಯಾಚರಣೆ ವ್ಯತ್ಯಯವಾಗುವ ಸಾಧ್ಯತೆ ಇದೆ. ನಗದು ವಿತ್‌ಡ್ರಾ, ಚೆಕ್ ಕ್ಲಿಯರೆನ್ಸ್, ಶಾಖಾ ಸೇವೆಗಳು ಸೇರಿದಂತೆ ಹಲವು ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಳ್ಳುವ ಭೀತಿ ವ್ಯಕ್ತವಾಗಿದೆ. ಆದರೆ ಎಟಿಎಂ ಸೇವೆಗಳು ಹಾಗೂ ಆನ್‌ಲೈನ್ ಡಿಜಿಟಲ್ ವ್ಯವಹಾರಗಳು ಬಹುತೇಕ ಮುಂದುವರಿಯುವ ನಿರೀಕ್ಷೆ ಇದೆ.
ಕಾರ್ಮಿಕ ಕಾಯ್ದೆಗಳಿಂದ ಕಾರ್ಮಿಕರ ಹಕ್ಕುಗಳಿಗೆ ಧಕ್ಕೆ ಉಂಟಾಗಿದೆ, ಉದ್ಯೋಗ ಭದ್ರತೆ ಮತ್ತು ಸಂಘಟನೆಗಳ ಸ್ವಾತಂತ್ರ್ಯ ಕುಗ್ಗುತ್ತಿದೆ ಎಂಬುದು ಮುಷ್ಕರ ನಡೆಸುತ್ತಿರುವ ಸಂಘಟನೆಗಳ ಪ್ರಮುಖ ಆರೋಪವಾಗಿದೆ. ಈ ಕಾರಣದಿಂದ ಕೇಂದ್ರ ಸರ್ಕಾರವು ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಸಂಘಟನೆಗಳು ಆಗ್ರಹಿಸುತ್ತಿವೆ.
ಬ್ಯಾಂಕ್ ಗ್ರಾಹಕರು ಫೆಬ್ರವರಿ 12ರ ಮೊದಲು ಅಗತ್ಯ ವ್ಯವಹಾರಗಳನ್ನು ಮುಗಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಮುಷ್ಕರದ ತೀವ್ರತೆ ಹಾಗೂ ಪಾಲ್ಗೊಳ್ಳುವಿಕೆಯ ಮಟ್ಟದ ಮೇಲೆ ಬ್ಯಾಂಕ್ ಸೇವೆಗಳ ಸ್ಥಗಿತದ ವ್ಯಾಪ್ತಿ ನಿರ್ಧಾರವಾಗಲಿದೆ.








