ಮೊಬೈಲ್ ಫೋನ್ ನೀರಿಗೆ ಬಿದ್ದರೆ ಏನು ಮಾಡಬೇಕು?
ಮಂಗಳೂರು, ಜುಲೈ 16: ಅಕಸ್ಮಾತ್ ನಿಮ್ಮ ಮೊಬೈಲ್ ಫೋನ್ ನೀರಿಗೆ ಬಿದ್ದರೆ ಏನು ಮಾಡುತ್ತೀರಿ? ಈಗ ಬರುವ ಕೆಲವು ಸ್ಮಾರ್ಟ್ ಫೋನ್ ಗಳು ಜಲನಿರೋಧಕ ಹೊದಿಕೆ (ವಾಟರ್ ಪ್ರೂಫ್) ಯನ್ನು ಹೊಂದಿರುತ್ತವೆ. ಇದು ಮೊಬೈಲ್ ಫೋನ್ ಗೆ ನೀರಿನಿಂದ ಕೆಲವು ಸೆಕೆಂಡುಗಳ ಕಾಲ ಹಾನಿಯಾಗದಂತೆ ತಡೆಯುತ್ತದೆ. ಆದರೆ ಸಾಮಾನ್ಯವಾಗಿ ನಾವು ಉಪಯೋಗಿಸುವ ಮೊಬೈಲ್ ಫೋನ್ ಗಳು ಯಾವುದೇ ರೀತಿಯ ವಾಟರ್ ಪ್ರೂಫ್ ಹೊದಿಕೆಯನ್ನು ಹೊಂದಿರುವುದಿಲ್ಲ ಮತ್ತು ನೀರಿಗೆ ಬಿದ್ದ ಪಕ್ಷದಲ್ಲಿ ನಾವು ಏನು ಮಾಡಬೇಕು ಎಂದು ತಿಳಿದಿರುವುದಿಲ್ಲ.
ಹಾಗಾದರೆ ಮೊಬೈಲ್ ಫೋನ್ ನೀರಿಗೆ ಬಿದ್ದ ತಕ್ಷಣ ಏನು ಮಾಡಬೇಕು.
1. ನೀರಿನಿಂದ ಅದನ್ನು ತೆಗೆದು ತಕ್ಷಣವೇ ಸ್ವಿಚ್ ಆಫ್ ಮಾಡಿ. ಫೋನ್ ಸ್ವಿಚ್ ಆಫ್ ಮಾಡುವುದರಿಂದ ಯಾವುದೇ ಶಾರ್ಟ್ ಸರ್ಕ್ಯೂಟ್, ಫೋನ್ ಇಂಟರ್ನಲ್ ಗಳನ್ನು ಹಾನಿಗೊಳಿಸುವುದನ್ನು ಇದು ತಡೆಯುತ್ತದೆ.
2. ಫೋನ್ ಬ್ಯಾಟರಿ, ಸಿಮ್ ಕಾರ್ಡ್, ಮೆಮೊರಿ ಕಾರ್ಡ್ ಮತ್ತು ಇತರ ಪರಿಕರಗಳನ್ನು ನೀರಿನ ಅಂಶವಿರದ ರೀತಿಯಲ್ಲಿ ಸ್ವಚ್ಛಗೊಳಿಸಿ. ಒಣಗಿದ ಬಟ್ಟೆಯಿಂದ ಸ್ವಚ್ಛಗೊಳಿಸಿ ನೀರಿನ ಅಂಶವನ್ನು ತೆಗೆಯಬಹುದು.
3. ಇನ್‌ಬಿಲ್ಟ್ ಬ್ಯಾಟರಿ ಫೋನ್ ಆಗಿದ್ದರೆ, ಸಿಮ್ ಸ್ಲೋಟ್ ತೆಗೆದು ಸ್ವಚ್ಛಗೊಳಿಸಿ.
4. ಮೊಬೈಲ್ ಫೋನ್ ನ ಹೆಡ್-ಫೋನ್ ಜ್ಯಾಕ್ ನಲ್ಲಿರುವ ಅಥವಾ ಇನ್ನಿತರ ಪೋರ್ಟ್ ನಲ್ಲಿ ನೀರಿದ್ದರೆ, ನೀರನ್ನು ತೆಗೆದುಹಾಕಲು ಮೊಬೈಲ್ ಫೋನ್ ಅನ್ನು ತಲೆಕೆಳಗೆ ಮಾಡಿ ಫೋನ್ ಅಲ್ಲಾಡಿಸಿ. ನಂತರ ಒಣಗಿದ ಬಟ್ಟೆಯಿಂದ ಫೋನ್ ಅನ್ನು ಸ್ವಚ್ಛಗೊಳಿಸಿ.
5. ಬಳಿಕ ಗಾಳಿಯಾಡದ ಪ್ಲಾಸ್ಟಿಕ್ ಕವರ್ ನಲ್ಲಿ ಅಥವಾ ಝಿಫ್-ಲಾಕ್ ಕವರಲ್ಲಿ ಅಕ್ಕಿಯನ್ನು ತುಂಬಿ. ನಂತರ ಅಕ್ಕಿಯ ಒಳಗೆ ಫೋನ್ ಅನ್ನು ಇರಿಸಿ ಝೀಪ್-ಲಾಕ್ / ಪ್ಲಾಸ್ಟಿಕ್ ಕವರ್ ಅನ್ನು ಬಿಗಿಯಾಗಿ ಪ್ಯಾಕ್ ಮಾಡಿ 2-3 ದಿನಗಳ ಕಾಲ ಹಾಗೇ ಇರಿಸಿ. ಓಟ್ ಮೀಲ್ ಅಥವಾ ಸಿಲಿಕಾ ಜೆಲ್ ಪ್ಯಾಕ್ ಗಳನ್ನು ಸಹ ನೀವು ಉಪಯೋಗಿಸಬಹುದು. ಹೀಗೆ ಮಾಡುವುದರಿಂದ ಮೊಬೈಲ್ ಫೋನ್‌ನಲ್ಲಿರುವ ತೇವಾಂಶವನ್ನು ಅಕ್ಕಿ/ಓಟ್ ಮೀಲ್/ಸಿಲಿಕಾ ಜೆಲ್ ಪ್ಯಾಕ್ ಹೀರಿಕೊಳ್ಳುತ್ತದೆ. ಈ ನಡುವೆ ಯಾವುದೇ ಕಾರಣಕ್ಕೂ ಅದನ್ನು ತೆರೆಯಲು ಹೋಗಬೇಡಿ.(ಯಾವುದೇ ಕಾರಣಕ್ಕೂ ಒದ್ದೆಯಾಗಿರುವ ಫೋನ್ ಅನ್ನು ಅಕ್ಕಿಯಲ್ಲಿ ಇಡಬೇಡಿ)
6. ಎರಡು-ಮೂರು ದಿನಗಳ ಬಳಿಕ ಅಕ್ಕಿಯಲ್ಲಿರುವ ಫೋನ್ ಅನ್ನು ಹೊರತೆಗೆದು ಬ್ಯಾಟರಿ, ಮೆಮೊರಿ ಕಾರ್ಡ್, ಸಿಮ್ ಸ್ಲೋಟ್ ಅನ್ನು ಹಾಕಿ ಫೋನ್ ಆನ್ ಮಾಡಿ.
7. ನೀರಿನಿಂದ ಹಾನಿ ಆಗದಿದ್ದ ಪಕ್ಷದಲ್ಲಿ ಫೋನ್ ಆನ್ ಆಗುತ್ತದೆ. ಹೀಗೆ ಮಾಡಿದ ಬಳಿಕವೂ ಫೋನ್ ಆನ್ ಆಗದಿದ್ದರೆ, ಅಧಿಕೃತ ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ.