ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ದಲಿತರ ಧ್ವನಿಯನ್ನು ಅಡಗಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದ ಯೋಜನೆಯ ಹೆಸರಿನಲ್ಲಿ ರಾಮನ ಉಲ್ಲೇಖ ಬಂದಿರುವುದನ್ನು ಸಹಿಸದ ಕಾಂಗ್ರೆಸ್, ತನ್ನ ಹಿಂದೂ ವಿರೋಧಿ ಮನಸ್ಥಿತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳು, ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟರು.
ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ರಾಮೋದ್ಭವ: ಕಾಂಗ್ರೆಸ್ ಆಕ್ರೋಶ
ಕೇಂದ್ರ ಸರ್ಕಾರದ ವಿಕಸಿತ ಭಾರತ ಗ್ಯಾರಂಟಿ ರೋಜ್ಗಾರ್ ಅಜೀವಿಕಾ ಮಿಷನ್ ಯೋಜನೆಯ ಸಂಕ್ಷಿಪ್ತ ರೂಪ ವಿಬಿ ಜಿ ರಾಮ್ ಜಿ ಎಂದಾಗಿದ್ದು, ಇದರಲ್ಲಿ ರಾಮ್ ಎಂಬ ಶಬ್ದ ಬಂದಿರುವುದು ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಇದು ಉದ್ದೇಶಪೂರ್ವಕವಾಗಿ ಜೋಡಿಸಿದ್ದಲ್ಲ, ಬದಲಾಗಿ ಯೋಜನೆಯ ಹೆಸರಿನಲ್ಲಿ ಆಕಸ್ಮಿಕವಾಗಿ ಬಂದಿರುವ ಪದವಾಗಿದೆ. ಆದರೆ ಹಿಂದುತ್ವ ಮತ್ತು ರಾಮನನ್ನು ವಿರೋಧಿಸುವುದನ್ನೇ ಚಟ ಮಾಡಿಕೊಂಡಿರುವ ಕಾಂಗ್ರೆಸ್, ಇದಕ್ಕಾಗಿ ವಿಶೇಷ ಅಧಿವೇಶನ ಕರೆಯುವ ಮೂಲಕ ಅನಗತ್ಯ ರಾದ್ಧಾಂತ ಮಾಡುತ್ತಿದೆ ಎಂದು ಟೀಕಿಸಿದರು.
ನರೇಗಾ ಯೋಜನೆಯನ್ನು ಬಲಪಡಿಸಿ, ಯಂತ್ರಗಳ ಬದಲು ಜನರೇ ಕೆಲಸ ಮಾಡುವಂತೆ ಮತ್ತು ದಿನಗೂಲಿಯನ್ನು 100 ದಿನಗಳಿಂದ 125 ದಿನಗಳಿಗೆ ಏರಿಸುವ ಮಹತ್ವದ ಯೋಜನೆ ಇದಾಗಿದೆ. ನೇರವಾಗಿ ಫಲಾನುಭವಿಗಳ ಖಾತೆಗೆ 370 ರೂ. ಜಮೆ ಮಾಡುವ ಈ ಯೋಜನೆಯ ಮೂಲಕ ಗ್ರಾಮೀಣ ಬದುಕು ಹಸನಾಗಲಿದೆ. ಆದರೆ ಕಾಂಗ್ರೆಸ್ಸಿಗರು ರಾಮನ ಹೆಸರಿನ ಮೇಲಿನ ದ್ವೇಷದಿಂದ ಅಭಿವೃದ್ಧಿ ಕಾರ್ಯಕ್ಕೂ ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಬಿ.ಕೆ. ಹರಿಪ್ರಸಾದ್ ವರ್ತನೆಗೆ ಖಂಡನೆ
ಸದನದಲ್ಲಿ ರಾಜ್ಯಪಾಲರ ಭಾಷಣದ ವೇಳೆ ನಡೆದ ಘಟನೆಗೆ ಬಿ.ಕೆ. ಹರಿಪ್ರಸಾದ್ ಅವರೇ ನೇರ ಹೊಣೆ ಎಂದು ನಾರಾಯಣಸ್ವಾಮಿ ದೂರಿದರು. ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರಿಗೆ ಅಗೌರವ ತೋರುವುದು, ಸದನದಲ್ಲಿ ಆರೆಸ್ಸೆಸ್ ಬಗ್ಗೆ ಅನಗತ್ಯವಾಗಿ ಮಾತನಾಡುವುದು, ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದು ಹರಿಪ್ರಸಾದ್ ಅವರ ಚಪಲವಾಗಿದೆ. ರಾಜ್ಯಪಾಲರಿಗೆ ಕೈ ತೋರಿಸಿದ್ದನ್ನು ಪ್ರಶ್ನಿಸಿದರೆ, ಕಾಲು ತೋರಿಸಬೇಕಿತ್ತೇ ಎಂದು ಉದ್ಧಟತನದ ಮಾತನಾಡುತ್ತಾರೆ. ಇಂತಹ ಅಹಂಕಾರಿ ನಾಯಕರ ಗರ್ವಭಂಗವನ್ನು ಬಿಜೆಪಿ ಸದಸ್ಯರು ಒಕ್ಕೊರಲಿನಿಂದ ಮಾಡಿದ್ದಾರೆ. ಇಂತಹ ವ್ಯಕ್ತಿಗಳು ರಾಜಕೀಯ ಕ್ಷೇತ್ರಕ್ಕೆ ಕಳಂಕ ಎಂದು ಕಿಡಿಕಾರಿದರು.
ದಲಿತ ನಾಯಕರೇ ಕಾಂಗ್ರೆಸ್ ಟಾರ್ಗೆಟ್
ರಾಜ್ಯ ಸರ್ಕಾರದಲ್ಲಿ ದಲಿತ ಸಚಿವರು ಮತ್ತು ನಾಯಕರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದರು. ಅಬಕಾರಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಸಚಿವರ ಮಗನ ಹೆಸರು ಮತ್ತು ಲಂಚದ ಬಗ್ಗೆ ಸಾಕ್ಷ್ಯಗಳಿದ್ದರೂ, ದಲಿತ ಕಾರ್ಡ್ ಬಳಸಿ ಪಾರಾಗಲು ನೋಡುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಜಾತಿ ಇಲ್ಲ, ಆದರೆ ಸಚಿವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಡಾ. ಅಂಬೇಡ್ಕರ್ ಅವರ ಹೆಸರನ್ನು ಬಳಸುವುದು ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ಅವರು ಹೇಳಿದರು.
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಅವ್ಯವಹಾರ ನಡೆದಾಗ ಸಚಿವ ನಾಗೇಂದ್ರ ಅವರನ್ನು ಬಲಿಪಶು ಮಾಡಲಾಯಿತು. ಈಗ ನೇರ ಮಾತುಗಾರರಾದ ಕೆ.ಎನ್. ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಚುನಾವಣೆಯಿಂದ ದೂರವಿಡಲು ಷಡ್ಯಂತ್ರ ರೂಪಿಸಲಾಗಿದೆ. ಗೃಹ ಸಚಿವ ಡಾ. ಪರಮೇಶ್ವರ್ ಅವರ ಇಲಾಖೆಯಲ್ಲಿ ಬೇರೆಯವರ ಹಸ್ತಕ್ಷೇಪ ಮಿತಿಮೀರಿದ್ದು, ಅವರು ಅಸಹಾಯಕರಾಗಿದ್ದಾರೆ. ಎರಡು ವರ್ಷಗಳಿಂದ ಪೊಲೀಸ್ ವರ್ಗಾವಣೆ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದೆಲ್ಲವನ್ನೂ ನೋಡಿದರೆ ಕಾಂಗ್ರೆಸ್ ಸರ್ಕಾರ ದಲಿತರ ಧ್ವನಿಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ವಿಶ್ಲೇಷಿಸಿದರು.
ಸರ್ಕಾರ ಮತಬ್ಯಾಂಕ್ ರಾಜಕಾರಣಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನೂ ಕಡೆಗಣಿಸುತ್ತಿದೆ. ಬೆಂಗಳೂರಿನಲ್ಲಿ ಬಾಂಗ್ಲಾದೇಶೀಯರು ಮತ್ತು ರೋಹಿಂಗ್ಯಾಗಳು ಅವ್ಯಾಹತವಾಗಿ ತುಂಬಿಕೊಂಡಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ಸಿಕ್ಕಿಬಿದ್ದ ಭಾರೀ ಪ್ರಮಾಣದ ಮಾದಕವಸ್ತುವನ್ನು ಸಚಿವರು ಫಿನಾಯಿಲ್ ಎಂದು ಹೇಳಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದರು. ಆದರೆ ಸೂರತ್ ನಾರ್ಕೊಟಿಕ್ಸ್ ಬ್ಯುರೋ ಇದು ಮಾದಕವಸ್ತು ಎಂದು ದೃಢಪಡಿಸಿದೆ. ಫಿನಾಯಿಲ್ ಓಪಿಯಂ ಆಗಿದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ಅಭಿವೃದ್ಧಿ ಶೂನ್ಯವಾಗಿದೆ ಎಂದು ಹರಿಹಾಯ್ದರು.








