ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಪಾವತಿಸದ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. GBA ಅಧೀನದಲ್ಲಿರುವ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 7 ಸಾವಿರಕ್ಕೂ ಹೆಚ್ಚು ಆಸ್ತಿಗಳನ್ನು ಹರಾಜು ಹಾಕಲು ತೀರ್ಮಾನಿಸಲಾಗಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಈ 5 ನಗರ ಪಾಲಿಕೆಗಳಲ್ಲಿ ₹437 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ತೆರಿಗೆ ಬಾಕಿ ಉಳಿದಿದೆ. ತೆರಿಗೆ ಪಾವತಿಸದೇ ಇರುವ ಆಸ್ತಿ ಮಾಲೀಕರಿಗೆ ಈಗಾಗಲೇ ನೋಟಿಸ್‌ಗಳನ್ನು ಜಾರಿ ಮಾಡಲಾಗಿತ್ತು. ಆದರೆ ನೋಟಿಸ್ ನೀಡಿದ ಬಳಿಕವೂ ಅನೇಕರು ತೆರಿಗೆ ಪಾವತಿಸದೇ ಇರುವ ಹಿನ್ನೆಲೆ, ಆಸ್ತಿಗಳ ಜಪ್ತಿ ಆದೇಶ ಹೊರಡಿಸಲಾಗಿದೆ.
ಜಪ್ತಿ ಆದೇಶದ ನಂತರವೂ ತೆರಿಗೆ ಪಾವತಿಸಲು ಮುಂದಾಗದ ಮಾಲೀಕರ ವಿರುದ್ಧ ಹರಾಜು ಪ್ರಕ್ರಿಯೆ ಆರಂಭಿಸಲು GBA ತೀರ್ಮಾನಿಸಿದೆ. ಅದರಂತೆ, ಫೆಬ್ರವರಿ 17ರಂದು ಜಂಟಿ ಆಯುಕ್ತರ ಕಚೇರಿಗಳಲ್ಲಿ ಆಸ್ತಿಗಳ ಹರಾಜು ನಡೆಯಲಿದೆ ಎಂದು GBA ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ತಿ ತೆರಿಗೆ ಪಾವತಿ ನಗರಾಭಿವೃದ್ಧಿಗೆ ಅತ್ಯಂತ ಪ್ರಮುಖ ಆದಾಯ ಮೂಲವಾಗಿದ್ದು, ರಸ್ತೆ, ನೀರು, ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಈ ಹಣ ಬಳಕೆಯಾಗುತ್ತದೆ. ಹೀಗಾಗಿ ತೆರಿಗೆ ಪಾವತಿಯಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಕೆಲವೇ ದಿನಗಳಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಆಸ್ತಿ ಮಾಲೀಕರು ತಕ್ಷಣವೇ ಬಾಕಿ ತೆರಿಗೆ ಪಾವತಿಸಿ ಹರಾಜು ತಪ್ಪಿಸಿಕೊಳ್ಳಬೇಕು ಎಂಬ ಎಚ್ಚರಿಕೆಯನ್ನು GBA ನೀಡಿದೆ. ಈ ಕ್ರಮದಿಂದ ನಗರ ಪಾಲಿಕೆಗಳ ಆದಾಯ ಹೆಚ್ಚುವ ನಿರೀಕ್ಷೆಯಿದೆ.








