ಇಸ್ಲಾಮಾಬಾದ್:ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಓಲೈಸಲು ಪಾಕಿಸ್ತಾನ ಸರ್ಕಾರ ಮತ್ತು ಸೇನೆ ನಡೆಸಿದ ಎಲ್ಲಾ ಕಸರತ್ತುಗಳು ಮಣ್ಣುಪಾಲಾಗಿದ್ದು, ಭಾರತಕ್ಕೆ ಸಿಕ್ಕ ಗೌರವ ಮತ್ತು ಆದ್ಯತೆ ಕಂಡು ಪಾಕಿಸ್ತಾನಿ ತಜ್ಞರು ಹಾಗೂ ನಾಗರಿಕರು ತಮ್ಮದೇ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ನಾವು ಗುಲಾಮರಂತೆ ವರ್ತಿಸಿದರೂ ಅಮೆರಿಕ ನಮಗೆ ಕನಿಷ್ಠ ಗೌರವವನ್ನೂ ನೀಡಲಿಲ್ಲ. ಆದರೆ ಭಾರತವು ತಲೆ ಎತ್ತಿ ನಿಂತು ರಾಜತಾಂತ್ರಿಕ ಗೌರವದೊಂದಿಗೆ ನಮ್ಮಗಿಂತ ಉತ್ತಮ ಒಪ್ಪಂದವನ್ನು ಪಡೆದುಕೊಂಡಿದೆ ಎಂದು ಪಾಕಿಸ್ತಾನದ ಆರ್ಥಿಕ ತಜ್ಞರು ಮತ್ತು ವಿಶ್ಲೇಷಕರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಫೆಬ್ರವರಿ 2 ರಂದು ಅಮೆರಿಕ ಮತ್ತು ಭಾರತದ ನಡುವೆ ಏರ್ಪಟ್ಟ ಐತಿಹಾಸಿಕ ವ್ಯಾಪಾರ ಒಪ್ಪಂದವು ಪಾಕಿಸ್ತಾನದ ನಿದ್ದೆಗೆಡಿಸಿದೆ. ಹೊಸ ಒಪ್ಪಂದದ ಅನ್ವಯ ಅಮೆರಿಕವು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇಕಡಾ 18 ಕ್ಕೆ ಇಳಿಸಿದೆ. ಆದರೆ, ಪಾಕಿಸ್ತಾನದ ಮೇಲೆ ಶೇಕಡಾ 19 ರಷ್ಟು ಸುಂಕವನ್ನು ವಿಧಿಸಿದೆ. ಈ ಒಂದು ಶೇಕಡಾ ವ್ಯತ್ಯಾಸವು ಕೇವಲ ಆರ್ಥಿಕ ನಷ್ಟವನ್ನಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಮತ್ತು ಪಾಕಿಸ್ತಾನದ ಸ್ಥಾನಮಾನವನ್ನು ಸ್ಪಷ್ಟಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಪ್ರಮುಖ ಅರ್ಥಶಾಸ್ತ್ರಜ್ಞ ಜಾವೇದ್ ಹಸನ್, ಭಾರತವು ಟ್ರಂಪ್ ಅವರನ್ನು ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಿಲ್ಲ. ಆದರೂ ಅವರು ನಮಗಿಂತ ಉತ್ತಮ ಸುಂಕದ ರಿಯಾಯಿತಿಯನ್ನು ಪಡೆದಿದ್ದಾರೆ. ನಾವು ಎಲ್ಲವನ್ನೂ ಮಾಡಿಯೂ ಬರಿಗೈಯಲ್ಲಿ ನಿಂತಿದ್ದೇವೆ ಎಂದು ಸರ್ಕಾರದ ವೈಫಲ್ಯವನ್ನು ಟೀಕಿಸಿದ್ದಾರೆ.
ನೊಬೆಲ್ ಆಮಿಷವೊಡ್ಡಿದರೂ ಕರಗದ ಟ್ರಂಪ್
ಅಮೆರಿಕದೊಂದಿಗಿನ ಸಂಬಂಧವನ್ನು ಸುಧಾರಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ನಡೆಸಿದ ಹತಾಶ ಪ್ರಯತ್ನಗಳು ಈಗ ನಗೆಪಾಟಲಿಗೆ ಈಡಾಗಿವೆ. ಟ್ರಂಪ್ ಅವರನ್ನು ಓಲೈಸುವ ಭರದಲ್ಲಿ ಪಾಕಿಸ್ತಾನ ಸರ್ಕಾರವು ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಅಸಿಮ್ ಮುನೀರ್ ಪದೇ ಪದೇ ವಾಷಿಂಗ್ಟನ್‌ಗೆ ಭೇಟಿ ನೀಡಿ ಲಾಬಿ ನಡೆಸಿದ್ದರು. ಅಲ್ಲದೇ ಗಾಜಾ ಶಾಂತಿ ಮಂಡಳಿಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಅನಗತ್ಯ ಪ್ರಚಾರವನ್ನೂ ಮಾಡಲಾಗಿತ್ತು. ಇಷ್ಟೆಲ್ಲಾ ಮಾಡಿದರೂ, ಅಂತಿಮವಾಗಿ ಟ್ರಂಪ್ ಅವರು ಭಾರತಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಪಾಕಿಸ್ತಾನದ ಪ್ರಯತ್ನಗಳಿಗೆ ತಣ್ಣೀರೆರಚಿದ್ದಾರೆ.
ಗೌರವವನ್ನು ಖರೀದಿಸಲು ಸಾಧ್ಯವಿಲ್ಲ
ಪಾಕಿಸ್ತಾನದ ಪ್ರಸ್ತುತ ವಿದೇಶಾಂಗ ನೀತಿಯನ್ನು ಗುಲಾಮಗಿರಿ ವರ್ತನೆ ಎಂದು ಅಲ್ಲಿನ ರಾಜಕೀಯ ವಿಶ್ಲೇಷಕರು ಮತ್ತು ಪತ್ರಕರ್ತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಗೌರವವನ್ನು ಹಣ ಕೊಟ್ಟಾಗಲಿ ಅಥವಾ ಹೊಗಳಿಕೆಯ ಮಾತುಗಳಿಂದಾಗಲಿ ಖರೀದಿಸಲು ಸಾಧ್ಯವಿಲ್ಲ, ಅದನ್ನು ಗಳಿಸಬೇಕು. ಭಾರತವು ತನ್ನ ಆರ್ಥಿಕ ಶಕ್ತಿ ಮತ್ತು ಘನತೆಯಿಂದ ಅಮೆರಿಕದ ಗೌರವವನ್ನು ಗಳಿಸಿದೆ. ಆದರೆ ನಮ್ಮ ನಾಯಕರು ಭಿಕ್ಷುಕರಂತೆ ವರ್ತಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಮತ್ತು ನಾಗರಿಕ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯು ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಬಲ ಸ್ಥಾನಮಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಪಾಕಿಸ್ತಾನದ ರಾಜತಾಂತ್ರಿಕ ವೈಫಲ್ಯವನ್ನು ಜಗಜ್ಜಾಹೀರು ಮಾಡಿದೆ.








