ನಿಜಾಮಾಬಾದ್: ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು ಎಂದಿಗೂ ಹಿಂದೂ ಜನಸಂಖ್ಯೆಯನ್ನು ಮೀರುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಪಾದಿಸಿದ್ದಾರೆ. ತೆಲಂಗಾಣದ ನಗರಸಭೆ ಚುನಾವಣೆಯ ಹಿನ್ನಲೆಯಲ್ಲಿ ನಿಜಾಮಾಬಾದ್‌ನಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಿರುದ್ಯೋಗದ ಬಗ್ಗೆ ಮೌನವೇಕೆ
ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿದ ಓವೈಸಿ, ಜಗತ್ತಿನ ಇತರೆಡೆ ಜನಸಂಖ್ಯೆಯು ವಯಸ್ಸಾಗುತ್ತಿದೆ, ಆದರೆ ಭಾರತದಲ್ಲಿ ಶೇ. 60ರಷ್ಟು ಜನರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಮೋದಿ ಹೇಳಿದ್ದರು. ಆದರೆ, ಈ ಯುವಶಕ್ತಿಗೆ ಉದ್ಯೋಗ ಕಲ್ಪಿಸಲು ಪ್ರಧಾನಿಯವರು ಯಾವ ಕ್ರಮ ಕೈಗೊಂಡಿದ್ದಾರೆ? ಯುವಕರ ಕೌಶಲ್ಯ ವೃದ್ಧಿಗೆ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು. ನಿರುದ್ಯೋಗದ ನೈಜ ಸಮಸ್ಯೆಯನ್ನು ಮರೆಮಾಚಲು ಜನಸಂಖ್ಯೆಯ ವಿಷಯವನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಮುಸ್ಲಿಂ ಜನಸಂಖ್ಯೆ ಸ್ಥಿರವಾಗಿದೆ
ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಮಿತಿಮೀರಿ ಹೆಚ್ಚಾಗುತ್ತಿದೆ ಎಂಬ ಬಿಜೆಪಿಯ ಪ್ರಚಾರವನ್ನು ತಳ್ಳಿಹಾಕಿದ ಓವೈಸಿ, ದೇಶದಲ್ಲಿ ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆ ದರವು ಸ್ಥಿರವಾಗಿದೆ. ಭಾರತದಲ್ಲಿ ಮುಸ್ಲಿಮರು ಎಂದಿಗೂ ಹಿಂದೂಗಳ ಸಂಖ್ಯೆಯನ್ನು ಮೀರಿಸಲು ಸಾಧ್ಯವಿಲ್ಲ. ಅನಗತ್ಯವಾಗಿ ಜನಸಂಖ್ಯೆಯ ಬಗ್ಗೆ ಸುಳ್ಳು ಭೀತಿಯನ್ನು ಹುಟ್ಟಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಆರ್‌ಎಸ್‌ಎಸ್ ದ್ವಂದ್ವ ನೀತಿ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗಳನ್ನು ಟೀಕಿಸಿದ ಓವೈಸಿ, ಸಂಘ ಪರಿವಾರದ ನಾಯಕರು ಮೊದಲು ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿಮಾಡಲು ಒತ್ತಾಯಿಸಿದ್ದರು. ಆದರೆ ಈಗ ಹಿಂದೂ ದಂಪತಿಗಳು ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮನೀಡಬೇಕು ಎಂದು ಕರೆ ನೀಡುತ್ತಿದ್ದಾರೆ. ಇದು ಅವರ ಸಿದ್ಧಾಂತದಲ್ಲಿನ ಗೊಂದಲ ಮತ್ತು ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಪಾಕ್ ಆಟಗಾರರ ಸ್ವಾಗತವೇಕೆ
ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ಗೆ ಪಾಕಿಸ್ತಾನ ತಂಡದ ಆಗಮನವನ್ನು ಪ್ರಶ್ನಿಸಿದ ಓವೈಸಿ, ಗಡಿಯಲ್ಲಿ ನಮ್ಮ ಯೋಧರು ಹುತಾತ್ಮರಾಗುತ್ತಿರುವಾಗ, ಪಾಕಿಸ್ತಾನದ ಆಟಗಾರರಿಗೆ ಹೈದರಾಬಾದ್‌ನಲ್ಲಿ ಬಿರಿಯಾನಿ ಉಣಬಡಿಸಲಾಗುತ್ತಿದೆ. ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ಎಂದು ಹೇಳಿಕೊಳ್ಳುವ ಸರ್ಕಾರ, ಅವರನ್ನು ಇಲ್ಲಿಗೇಕೆ ಬರಮಾಡಿಕೊಂಡಿದೆ? ಅವರನ್ನು ಮರಳಿ ಅವರ ದೇಶಕ್ಕೆ ಹೋಗಿ ಎಂದು ಹೇಳುವ ಧೈರ್ಯ ಸರ್ಕಾರಕ್ಕಿಲ್ಲವೇ? ಸರ್ಕಾರ ಮೌನವಾಗಿ ಕುಳಿತಿರುವುದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.








