ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಮತ್ತು ನಾಯಕತ್ವ ಬದಲಾವಣೆಯ ಗುಸುಗುಸು ತೀವ್ರಗೊಂಡಿರುವ ಹೊತ್ತಿನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಹೈಕಮಾಂಡ್ ಭೇಟಿಯ ಬಳಿಕ ಮಾಧ್ಯಮಗಳತ್ತ ತಿರುಗಿದ ಡಿಕೆಶಿ, ದೆಹಲಿಗೆ ಬಂದಿರುವುದೇ ರಾಜಕೀಯ ಮಾಡಲು, ಎಲ್ಲ ವಿಚಾರಗಳನ್ನು ಮಾತನಾಡದೆ ಸುಮ್ಮನೆ ವಾಪಸ್ ಹೋಗುತ್ತೇನಾ ಎಂದು ಪ್ರಶ್ನಿಸುವ ಮೂಲಕ ತಮ್ಮ ಭೇಟಿಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.
ಅಧಿಕಾರ ಹಂಚಿಕೆಯ ಸ್ಫೋಟಕ ಚರ್ಚೆ
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ಜನಪಥ ನಿವಾಸದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಗೌಪ್ಯ ಸಭೆಯ ನಂತರ ಡಿಕೆ ಶಿವಕುಮಾರ್ ಮಾಧ್ಯಮದವರು ರಾಜ್ಯ ರಾಜಕೀಯದ ವಿದ್ಯಮಾನಗಳ ಬಗ್ಗೆ ಪ್ರಶ್ನಿಸಿದಾಗ, ಡಿಕೆಶಿ ನೀಡಿದ ಉತ್ತರ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಿತ್ತು. ಆದರೂ ಅವರ ಮಾತಿನಲ್ಲಿದ್ದ ಖಡಕ್ ಧ್ವನಿ ಅನೇಕ ಅರ್ಥಗಳನ್ನು ಕಲ್ಪಿಸುವಂತಿತ್ತು.
ನಾನೇನು ಸನ್ಯಾಸಿಯಲ್ಲ ಎಂಬ ಸಂದೇಶ
ದೆಹಲಿಗೆ ಬಂದಿರುವುದೇ ರಾಜಕೀಯ ಮಾಡಲು ಎಂದು ಹೇಳುವ ಮೂಲಕ, ಕೇವಲ ಅಸ್ಸಾಂ ಚುನಾವಣೆ ಮಾತ್ರವಲ್ಲದೇ ರಾಜ್ಯದ ಆಂತರಿಕ ವಿಚಾರಗಳನ್ನೂ ಹೈಕಮಾಂಡ್ ಮುಂದೆ ತೆರೆದಿಟ್ಟಿದ್ದೇನೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು. ಇಲ್ಲಿ ಬೀದಿಯಲ್ಲಿ ನಿಂತು ಎಲ್ಲವನ್ನೂ ಮಾತನಾಡಲು ಆಗುವುದಿಲ್ಲ. ಹೈಕಮಾಂಡ್ ಬಳಿ ಏನೇನು ಮಾತನಾಡಬೇಕೋ ಅದೆಲ್ಲವನ್ನೂ ಮಾತನಾಡಿದ್ದೇನೆ. ಯಾರ ಜೊತೆ ಏನೆಲ್ಲಾ ಚರ್ಚೆಯಾಗಿದೆ ಎಂಬುದೆಲ್ಲಾ ಗುಪ್ತ ವಿಚಾರ ಎಂದು ಹೇಳುವ ಮೂಲಕ ಕುತೂಹಲ ಕಾಯ್ದುಕೊಂಡರು.
ಅಸ್ಸಾಂ ನೆಪ ಅಸಲಿ ಆಟ ಬೇರೆ
ಮೇಲ್ನೋಟಕ್ಕೆ ಅಸ್ಸಾಂ ವಿಧಾನಸಭಾ ಚುನಾವಣೆಯ ಉಸ್ತುವಾರಿ ಮತ್ತು ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಬಂದಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಅಸ್ಸಾಂ ಚುನಾವಣಾ ಸಿದ್ಧತೆಗಳ ಬಗ್ಗೆ ಮಾತುಕತೆ ನಡೆದಿದೆ. ಆದರೆ, ಈ ನೆಪದಲ್ಲಿ ರಾಜ್ಯ ಕಾಂಗ್ರೆಸ್ ನಾಯಕತ್ವದ ವಿಷಯ ಪ್ರಮುಖವಾಗಿ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ. ಬುಧವಾರ ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಅವರೊಂದಿಗೂ ಡಿಕೆ ಬ್ರದರ್ಸ್ ಸುದೀರ್ಘ ಚರ್ಚೆ ನಡೆಸಿರುವುದು ಇದಕ್ಕೆ ಪುಷ್ಠಿ ನೀಡಿದೆ.
ಸೋನಿಯಾ ಒಲವು ರಾಹುಲ್ ನಿಲವು
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಡಿಕೆ ಶಿವಕುಮಾರ್ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎನ್ನಲಾಗಿದೆ. ಪಕ್ಷ ಸಂಕಷ್ಟದಲ್ಲಿದ್ದಾಗ ಡಿಕೆಶಿ ಪಟ್ಟ ಶ್ರಮವನ್ನು ಅವರು ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಆದರೆ, ಪಕ್ಷದ ಪ್ರಮುಖ ನಿರ್ಧಾರಗಳನ್ನು ಪ್ರಸ್ತುತ ರಾಹುಲ್ ಗಾಂಧಿ ಅವರೇ ತೆಗೆದುಕೊಳ್ಳುತ್ತಿರುವುದರಿಂದ, ಅವರನ್ನು ಒಲಿಸಿಕೊಳ್ಳುವುದು ಡಿಕೆಶಿಗೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಿನ್ನೆಯ ಭೇಟಿ ಅತ್ಯಂತ ಮಹತ್ವದ್ದಾಗಿದೆ.
ಕಾಲವೇ ಉತ್ತರಿಸಲಿದೆ ಎಂದ ಕನಕಪುರ ಬಂಡೆ
ನಾಯಕತ್ವ ಬದಲಾವಣೆ ಅಥವಾ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಡಿಕೆ ಶಿವಕುಮಾರ್, ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಈ ಒಂದು ವಾಕ್ಯವು ಮುಂಬರುವ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಯಾಗುವ ಮುನ್ಸೂಚನೆಯೇ ಎಂಬ ಚರ್ಚೆ ಈಗ ಗರಿಗೆದರಿದೆ.








