ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಡುವಿನ ರಾಜಕೀಯ ವಾಕ್ಸಮರ ತಾರಕಕ್ಕೇರಿದೆ. ಜಾತಿ ರಾಜಕಾರಣ, ಸಾಮಾಜಿಕ ನ್ಯಾಯ ಮತ್ತು ಒಕ್ಕಲಿಗ ನಾಯಕರ ಕಡೆಗಣನೆ ಕುರಿತಾದ ಚರ್ಚೆ ಇದೀಗ ವೈಯಕ್ತಿಕ ಟೀಕೆಗಳ ಹಂತ ತಲುಪಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಬರೆಯುವ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರ ನೆರಳಲ್ಲಿ ಬೆಳೆದು, ಅಧಿಕಾರ ಅನುಭವಿಸಿ ಕಡೆಗೆ ಪೊಗದಸ್ತಾಗಿ ಬೆಳೆದು ಬೇಲಿ ಹಾರಿದಿರಿ. ಅನ್ ಪಾಲಿಷ್ಡ್ ಡೈಮಂಡ್ ಎಂದು ಎಸ್.ಎಂ. ಕೃಷ್ಣ ಅವರನ್ನು ಕರೆದು ಕಾಂಗ್ರೆಸ್ ಸೇರಿದಿರಿ, ಆದರೆ ಕಡೆಗೆ ಅವರಿಗೇ ಬೆನ್ನಿಗೆ ಚೂರಿ ಹಾಕಿದಿರಿ. ನಿಮಗೆ ನಿಜವಾಗಿಯೂ ಒಕ್ಕಲಿಗರ ಮೇಲೆ ಪ್ರೀತಿ ಇದ್ದರೆ ಸಿಎಂ ಸ್ಥಾನ ತ್ಯಜಿಸಿ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದ್ದಾರೆ.
ಸಾಮಾಜಿಕ ನ್ಯಾಯದ ಸೋಗುಗಾರ ನೀವು
ಸಿದ್ದರಾಮಯ್ಯನವರನ್ನು ಸಾಮಾಜಿಕ ನ್ಯಾಯದ ಸೋಗುಗಾರ ಮತ್ತು ಸಂಹಾರಿ ಎಂದು ಕರೆದಿರುವ ಕುಮಾರಸ್ವಾಮಿ, ದೇವೇಗೌಡರ ಕೊಡುಗೆಯನ್ನು ಸ್ಮರಿಸಿದ್ದಾರೆ. ನಿಮಗೆ ರಾಜಕೀಯ ಶಕ್ತಿ ಮತ್ತು ಬದುಕು ಕೊಟ್ಟಿದ್ದೇ ದೇವೇಗೌಡರು. ಇಂದು ನೀವು ಅನುಭವಿಸುತ್ತಿರುವ ಅಧಿಕಾರ ಮತ್ತು ಸಾಮಾಜಿಕ ನ್ಯಾಯದ ಹರಿಕಾರ ಎಂಬ ಪೋಷಾಕು ಎಲ್ಲವೂ ಗೌಡರ ಭಿಕ್ಷೆ. ಅಂದು ಗೌಡರು ಸ್ವಜಾತಿ ಅಥವಾ ಕುಟುಂಬ ಎಂದು ಯೋಚಿಸಿದ್ದರೆ ನಿಮಗೆ ಕನಿಷ್ಠ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವೂ ಸಿಗುತ್ತಿರಲಿಲ್ಲ. ಅಂದು ಹಲವರ ವಿರೋಧದ ನಡುವೆಯೂ ನಿಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಲು ದೇವೇಗೌಡರು ಹಠ ಹಿಡಿದಿದ್ದರು ಎಂದು ಎಚ್ಡಿಕೆ ಕಿಡಿಕಾರಿದ್ದಾರೆ.
ಎಸ್ಎಂ ಕೃಷ್ಣಗೆ ಚೂರಿ ಹಾಕಿದ್ದು ಜಗತ್ತಿಗೇ ಗೊತ್ತು
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ವಿಚಾರವನ್ನು ಪ್ರಸ್ತಾಪಿಸಿರುವ ಕುಮಾರಸ್ವಾಮಿ, ಸಿದ್ದರಾಮಯ್ಯನವರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ. ಎಸ್.ಎಂ. ಕೃಷ್ಣ ಅವರು ಅನ್ ಪಾಲಿಷ್ಡ್ ಡೈಮಂಡ್ ಎಂದು ಸೋನಿಯಾ ಗಾಂಧಿ ಅವರ ಬಳಿ ಹೇಳಿ ಕಾಂಗ್ರೆಸ್ ಸೇರ್ಪಡೆಯಾದಿರಿ. ಆದರೆ, ಕಾಂಗ್ರೆಸ್ ಮೆಟ್ಟಿಲು ಹತ್ತಿದ ನಂತರ ಕೃಷ್ಣ ಅವರಿಗೆ ನೀವು ಎಷ್ಟು ಕ್ರೂರವಾಗಿ ವಂಚಿಸಿದಿರಿ ಎಂಬುದು ಜಗತ್ತಿಗೆ ತಿಳಿದಿದೆ. ಅವರ ರಾಜಕೀಯದ ಕಡೆಗಾಲದಲ್ಲಿ ನೀವು ನಡೆಸಿಕೊಂಡ ರೀತಿ ಅತ್ಯಂತ ತುಚ್ಛವಾಗಿತ್ತು. ಕೃಷ್ಣ ಅವರ ಬೆನ್ನಿಗೆ ಚೂರಿ ಹಾಕಿದ್ದು ಸುಳ್ಳೇ ಎಂದು ಪ್ರಶ್ನಿಸಿದ್ದಾರೆ.
ಒಕ್ಕಲಿಗರ ಮೇಲೆ ಪ್ರೀತಿ ಇದ್ದರೆ ಕುರ್ಚಿ ಬಿಡಿ
ಕಾಂಗ್ರೆಸ್ ಪಕ್ಷ ಒಕ್ಕಲಿಗರಿಗೆ ಸಿಎಂ ಸ್ಥಾನ ನೀಡುತ್ತದೆ ಎಂಬ ವಾದ ಮುಂದಿಟ್ಟರೆ, ತಕ್ಷಣವೇ ನೀವು ಕುರ್ಚಿ ಬಿಟ್ಟುಕೊಡಬೇಕು ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಒಕ್ಕಲಿಗರ ಮೇಲೆ ನಿಮ್ಮ ಪ್ರೀತಿ ಪ್ರದರ್ಶನಕ್ಕೆ ಇದು ಸಕಾಲ. ದೆಹಲಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ನಡೆದ ಅಗ್ರಿಮೆಂಟ್ ಪ್ರಕಾರ ನಡೆದುಕೊಳ್ಳುವ ಉದಾರತೆ ತೋರಿ. ಎರಡನೇ ಅವಧಿಗೆ ಸಿಎಂ ಆಗುವ ಮುನ್ನ ಆಗಿದ್ದ ಒಪ್ಪಂದವನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಿದ್ದಾರೆ.
ದಲಿತ ನಾಯಕರ ರಾಜಕೀಯ ನರಮೇಧ
ಸಿದ್ದರಾಮಯ್ಯ ಅವರು ದಲಿತ ನಾಯಕರನ್ನು ತುಳಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಅವರು ನಿಮಗಿಂತ ಮೊದಲೇ ಸಿಎಂ ಆಗಬೇಕಿತ್ತು. ಆದರೆ ಇದ್ದ ಪ್ರತಿಪಕ್ಷ ಸ್ಥಾನವನ್ನೂ ಕಿತ್ತುಕೊಂಡು ಅವರನ್ನು ದೆಹಲಿಗೆ ಓಡಿಸಿದಿರಿ. ಡಾ. ಜಿ. ಪರಮೇಶ್ವರ್ ಅವರು ಅಡ್ಡಿಯಾಗುತ್ತಾರೆಂದು ಚುನಾವಣೆಯಲ್ಲಿ ಅವರನ್ನು ಸೋಲಿಸಿದಿರಿ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಪಕ್ಷದಲ್ಲಿದ್ದ ಸಮರ್ಥರ ರಾಜಕೀಯ ನರಮೇಧ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹನೀಯರ ಹೆಸರು ಹೇಳಬೇಡಿ
ಅಂತಿಮವಾಗಿ, ಬಸವಣ್ಣ, ಕುವೆಂಪು, ನಾರಾಯಣ ಗುರು ಹಾಗೂ ದೇವರಾಜ ಅರಸು ಅವರ ತತ್ವಾದರ್ಶಗಳನ್ನು ಪಾಲಿಸುತ್ತೇನೆ ಎಂದು ಹೇಳುವ ನೀವು, ಇನ್ನು ಮುಂದೆ ಆ ಮಹನೀಯರ ಹೆಸರೇಳುವ ಅರ್ಹತೆ ಕಳೆದುಕೊಂಡಿದ್ದೀರಿ. ಅಧಿಕಾರಕ್ಕಾಗಿ ಜಾತಿಯನ್ನು ಎಳೆದು ತರುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದೀರಿ. ಇದು ನಿಮಗಿಂತ ಚಿಕ್ಕವನಾದ ನಾನು ನೀಡುವ ಸಲಹೆ ಎಂದು ಕುಮಾರಸ್ವಾಮಿ ತಮ್ಮ ಪೋಸ್ಟ್ ಅಂತ್ಯಗೊಳಿಸಿದ್ದಾರೆ.








