ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಕುಸಿದ ಬಿಹಾರದ ಗೋಪಾಲ್ ಗಂಜ್‌ನ ಸತ್ತರ್ ಘಾಟ್ ಸೇತುವೆ
ಗೋಪಾಲ್ ಗಂಜ್, ಜುಲೈ 17: ಬಿಹಾರದ ಗೋಪಾಲ್ ಗಂಜ್‌ನ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾದ ಕಾರಣ ಗಂಡಕ್ ನದಿಯ ಸತ್ತರ್ ಘಾಟ್ ಸೇತುವೆಯ ಒಂದು ಭಾಗ ಬುಧವಾರ ಕುಸಿದ ಬಿದ್ದ ವರದಿಯಾಗಿದೆ . ಈ ಸೇತುವೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳೆದ ತಿಂಗಳು ಉದ್ಘಾಟಿಸಿದ್ದರು ಎಂದು ಹೇಳಲಾಗಿದ್ದು, ಇದೀಗ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಕುಸಿದ ಕಾರಣ ನಿತೀಶ್ ಸರಕಾರ ವಿರೋಧ ಪಕ್ಷಗಳ ಕಟು ಟೀಕೆಗೆ ಒಳಗಾಗಿದ್ದಾರೆ.
ಈ ಘಟನೆಯು ಆರ್‌ಜೆಡಿ ಮುಖಂಡ ತೇಜಶ್ವಿ ಯಾದವ್ ಮತ್ತು ಬಿಹಾರ ಕಾಂಗ್ರೆಸ್ ಮುಖ್ಯಸ್ಥ ಮದನ್ ಮೋಹನ್ ಝೂ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರ ಟೀಕೆಗೆ ಗುರಿಯಾಗಿದೆ.
ಆರ್‌ಜೆಡಿ ಮುಖಂಡ ತೇಜಶ್ವಿ ಯಾದವ್ ಟ್ವೀಟ್ ಮಾಡಿ, 8 ವರ್ಷಗಳಲ್ಲಿ 263.47 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಗೋಪಾಲ್‌ಗಂಜ್‌ನ ಸತ್ತರ್‌ಘಾಟ್ ಸೇತುವೆಯನ್ನು ಜೂನ್ 16 ರಂದು ನಿತೀಶ್ ಜಿ ಅವರು ಉದ್ಘಾಟಿಸಿದರು. ಇಂದು, 29 ದಿನಗಳ ನಂತರ, ಸೇತುವೆ ಕುಸಿದಿದೆ. 263 ಕೋಟಿ ರೂ ಯನ್ನು ಯಾರಾದರೂ ನಿತೀಶ್ ಜಿ ಅವರ ಭ್ರಷ್ಟಾಚಾರ ಎನ್ನುವುದಾದರೆ – ಇದು ಅವರ ಭ್ರಷ್ಟಾಚಾರದ ಕೇವಲ ಒಂದು ನೋಟವಷ್ಟೇ. ಅವರ ಇಲಿಗಳು ಸಹ ಈ ಮೊತ್ತದ ಮದ್ಯವನ್ನು ಸೇವಿಸುತ್ತವೆ ಎಂದು ಟೀಕಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಅವರು ಸಂಘಟಿತ ಭ್ರಷ್ಟಾಚಾರದ ನಿತೀಶ್ ಭೀಷ್ಮ ಪಿತಾಮಹ ಎಂದು ಕರೆದಿದ್ದು, ಸೇತುವೆ ಕುಸಿತದ ಬಗ್ಗೆ ಅವರು ಒಂದು ಮಾತನ್ನೂ ಆಡುವುದಿಲ್ಲ ಎಂದು ಹೇಳಿದ್ದಾರೆ. ಎಂಟು ವರ್ಷಗಳಲ್ಲಿ 263 ಕೋಟಿ ರೂ. ಬಜೆಟ್ ನಿರ್ಮಿಸಲಾಗಿದೆ, ಸೇತುವೆ ಕೇವಲ 29 ದಿನಗಳಲ್ಲಿ ಕುಸಿದಿದೆ. ಸಂಘಟಿತ ಭ್ರಷ್ಟಾಚಾರದ ತಂದೆ ನಿತೀಶ್ ಕುಮಾರ್ ಈ ಬಗ್ಗೆ ಒಂದು ಮಾತನ್ನೂ ಹೇಳುವುದಿಲ್ಲ. ಅವರ ಭ್ರಷ್ಟ ಸಾರಿಗೆ ಮಂತ್ರಿ ಮತ್ತು ಬಿಹಾರವನ್ನು ಲೂಟಿ ಮಾಡಿದ್ದಾರೆ ಎಂದು ತೇಜಶ್ವಿ ಯಾದವ್ ಟೀಕಿಸಿದ್ದಾರೆ.
ಮತ್ತೊಂದೆಡೆ, ಕಾಂಗ್ರೆಸ್ ಮುಖ್ಯಸ್ಥ ಮದನ್ ಮೋಹನ್ ಝೂ ಟ್ವೀಟ್ ಮಾಡಿದ್ದು, ‘ಜೂನ್ 16 ರಂದು 263.47 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆಯ ಉದ್ಘಾಟನೆ ಮತ್ತು ಜುಲೈ 15 ರಂದು ಅದರ ನಾಶ. ಈಗ, ಇದಕ್ಕಾಗಿ ಬಡ ಇಲಿಗಳನ್ನು ದೂಷಿಸಬೇಡಿ.’ ಎಂದು ಟೀಕಿಸಿದ್ದಾರೆ.
ಪೂರ್ವ ಚಾಮಪರ್ನ್‌ನ ವಿವಿಧ ಪಟ್ಟಣ ಮತ್ತು ಗೋಪಾಲ್‌ಗಂಜ್, ಸಿವಾನ್, ಸರನ್ ಜಿಲ್ಲೆಗಳ ನಡುವಿನ ಅಂತರ ಕಡಿಮೆ ಮಾಡುವ ಉದ್ದೇಶದಿಂದ ಈ ಸೇತುವೆ ನಿರ್ಮಿಸಲಾಗಿತ್ತು.
ಸರ್ಕಾರದಿಂದ ಸ್ಪಷ್ಟನೆ :
ವಿರೋಧ ಪಕ್ಷಗಳ ಟೀಕೆಯ ಬೆನ್ನಲ್ಲೇ ಬಿಹಾರ ಸರ್ಕಾರವು ಸೂಕ್ತ ಉತ್ತರ ನೀಡಿದ್ದು, ಉದ್ಘಾಟನೆಯಾದ ಸೇತುವೆಯು ಕುಸಿದಿಲ್ಲ ಎಂದು ಹೇಳಿದೆ. ಕುಸಿದಿರುವ ರಸ್ತೆಯು ಸೇತುವೆಯಿಂದ ಎರಡು ಕಿಲೋಮೀಟರ್ ದೂರದಲ್ಲಿದೆ ಮತ್ತು ಅದು 18 ಮೀಟರ್ ಉದ್ದದ ಕಾಸ್‌ವೇಯ ಮಾರ್ಗವಾಗಿದೆ ಎಂದು ಹೇಳಿದೆ