ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಭಾರೀ ತಲ್ಲಣಕ್ಕೊಳಗಾಗಿದೆ. ಯುದ್ಧ ಭೀತಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದ್ದು, ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಾಗಿದೆ.
ಬಿಎಸ್ಇ ಸೆನ್ಸೆಕ್ಸ್ ಬರೋಬ್ಬರಿ 1,700 ಪಾಯಿಂಟ್ಗಳಷ್ಟು ಕುಸಿತ ಕಂಡಿದ್ದು, ನಿಫ್ಟಿ 50 ಸುಮಾರು 560 ಪಾಯಿಂಟ್ಗಳಷ್ಟು ಇಳಿಕೆ ದಾಖಲಿಸಿದೆ. ಜಾಗತಿಕ ಅನಿಶ್ಚಿತತೆ, ತೈಲ ಬೆಲೆ ಏರಿಕೆ ಭೀತಿ ಹಾಗೂ ವಿದೇಶಿ ಹೂಡಿಕೆದಾರರ ಹೊರಹರಿವು ಇವು ಕುಸಿತಕ್ಕೆ ಪ್ರಮುಖ ಕಾರಣಗಳಾಗಿ ವಿಶ್ಲೇಷಕರು ಹೇಳುತ್ತಿದ್ದಾರೆ.
ಪ್ರಮುಖವಾಗಿ ಐಟಿ, ಬಂದರು, ಏರ್ವೇಸ್, ಆಟೋಮೊಬೈಲ್ ಮತ್ತು ತೈಲ ವಲಯದ ಷೇರುಗಳು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ವಿಮಾನಯಾನ ಮತ್ತು ತೈಲ ವಲಯಗಳಿಗೆ ತೈಲ ಬೆಲೆ ಏರಿಕೆಯ ಆತಂಕ ನೇರ ಪರಿಣಾಮ ಬೀರಿದೆ. ಜಾಗತಿಕ ಸರಕು ಸರಪಳಿ ವ್ಯತ್ಯಯದ ಭೀತಿಯೂ ಆಟೋಮೊಬೈಲ್ ಮತ್ತು ಲಾಜಿಸ್ಟಿಕ್ಸ್ ವಲಯದ ಮೇಲೆ ಒತ್ತಡ ತಂದಿದೆ.
ಈ ಕುಸಿತದಿಂದ ಹೂಡಿಕೆದಾರರ ಸುಮಾರು ₹10 ಲಕ್ಷ ಕೋಟಿ ಮೌಲ್ಯದ ಸಂಪತ್ತು ಮಾರುಕಟ್ಟೆಯಲ್ಲಿ ಕರಗಿದೆ ಎಂದು ಅಂದಾಜಿಸಲಾಗಿದೆ. ಚಿಲ್ಲರೆ ಹೂಡಿಕೆದಾರರು ಸಹ ಮಾರುಕಟ್ಟೆ ಪರಿಸ್ಥಿತಿಯ ಬಗ್ಗೆ ಆತಂಕಗೊಂಡಿದ್ದಾರೆ.
ಇದರ ವಿರುದ್ಧವಾಗಿ, ಚಿನ್ನ ಹಾಗೂ ಬೆಳ್ಳಿ ETFಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಅನಿಶ್ಚಿತತೆ ಹೆಚ್ಚಾದಾಗ ಸುರಕ್ಷಿತ ಹೂಡಿಕೆ ಆಯ್ಕೆಯಾಗಿ ಪರಿಗಣಿಸಲ್ಪಡುವ ಬಂಗಾರ ಬೆಲೆ ಏರಿಕೆಯಾಗಿದ್ದು, ಸಂಬಂಧಿತ ETFಗಳಲ್ಲೂ ಜೋರಾದ ಏರಿಕೆ ಕಂಡುಬರುತ್ತಿದೆ.
ಮುಂದಿನ ದಿನಗಳಲ್ಲಿ ಜಾಗತಿಕ ಪರಿಸ್ಥಿತಿಯ ಬೆಳವಣಿಗೆಗಳೇ ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.








