ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ವ್ಯಾಪಾರಕ್ಕೆ ಧಕ್ಕೆಯೊಡ್ಡುತ್ತಿರುವ ಹಿನ್ನೆಲೆ, ಅದರ ಪರಿಣಾಮ ಬೆಂಗಳೂರಿನ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿಶೇಷವಾಗಿ ಡ್ರೈಫ್ರೂಟ್ಸ್ ಬೆಲೆಯಲ್ಲಿ ಏರಿಕೆ ಹಾಗೂ ಪೂರೈಕೆ ತೊಂದರೆ ಎದುರಾಗಬಹುದು ಎಂಬ ಅಂದಾಜು ವ್ಯಕ್ತವಾಗಿದೆ.
ಬೆಂಗಳೂರು ನಗರಕ್ಕೆ ಆಮದಾಗುವ ಡ್ರೈಫ್ರೂಟ್ಸ್ಗಳಲ್ಲಿ ಗಮನಾರ್ಹ ಪ್ರಮಾಣದ ವಸ್ತುಗಳು ಇರಾನ್ನಿಂದ ಬರುತ್ತವೆ. ಅಂಜೂರ (ಅಥವಾ ಅತ್ತಿ), ಮಾಮ್ರಾ ಬಾದಾಮಿ, ಪಿಸ್ತಾ, ಪೈನ್ ಬೀಜ ಹಾಗೂ ಮಜಾಫತಿ ಖರ್ಜೂರಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಪ್ರಮುಖ ಉತ್ಪನ್ನಗಳಾಗಿವೆ.
ವ್ಯಾಪಾರಿಗಳ ಪ್ರಕಾರ, ಸಾಗಾಟ ಮಾರ್ಗಗಳಲ್ಲಿ ವ್ಯತ್ಯಯ ಉಂಟಾದರೆ ಸರಕು ತಡವಾಗಿ ತಲುಪುವ ಸಾಧ್ಯತೆ ಇದೆ. ಅದರಿಂದ ತಾತ್ಕಾಲಿಕ ಕೊರತೆ ಉಂಟಾಗಿ ಬೆಲೆ ಏರಿಕೆ ಆಗಬಹುದು. ವಿಶೇಷವಾಗಿ ರಂಜಾನ್ ಸಮಯದಲ್ಲಿ ಮಜಾಫತಿ ಖರ್ಜೂರಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ, ಸರಬರಾಜು ಅಡಚಣೆ ಉಂಟಾದರೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಟಾಕ್ ಕೆಲವು ವಾರಗಳಿಗೆ ಸಾಕಾಗಬಹುದು ಎಂದು ವ್ಯಾಪಾರಿಗಳು ಹೇಳುತ್ತಿದ್ರೂ, ಸಂಘರ್ಷ ಮುಂದುವರಿದರೆ ಆಮದು ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಭೀತಿ ವ್ಯಕ್ತವಾಗಿದೆ.
ಒಟ್ಟಿನಲ್ಲಿ, ಜಾಗತಿಕ ರಾಜಕೀಯ ಬೆಳವಣಿಗೆಗಳು ಸ್ಥಳೀಯ ಮಾರುಕಟ್ಟೆಯ ಮೇಲೂ ಹೇಗೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ರೂಪುಗೊಳ್ಳುತ್ತದೆ ಎಂಬುದರ ಮೇಲೆ ಬೆಲೆ ಸ್ಥಿರತೆ ಅವಲಂಬಿತವಾಗಿರಲಿದೆ.








