ಇರಾನ್–ಅಮೆರಿಕಾ ಹಾಗೂ ಇಸ್ರೇಲ್ ನಡುವಿನ ಸಂಘರ್ಷದ ಆತಂಕದ ನಡುವೆ ದೇಶೀಯ ಷೇರು ಮಾರುಕಟ್ಟೆಗಳು ಭಾರೀ ನಷ್ಟದೊಂದಿಗೆ ವಹಿವಾಟು ಆರಂಭಿಸಿವೆ. ಜಾಗತಿಕ ಅನಿಶ್ಚಿತತೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಭೀತಿಯಿಂದ ಹೂಡಿಕೆದಾರರು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದಾರೆ.
ಬಿಎಸ್ಇ ಸೆನ್ಸಕ್ಸ್ 1,568 ಪಾಯಿಂಟ್ಗಳ ಕುಸಿತದೊಂದಿಗೆ ಸುಮಾರು 78,669 ಮಟ್ಟಕ್ಕೆ ಇಳಿದಿದೆ. ಇನ್ನೊಂದೆಡೆ ನಿಫ್ಟಿ 50 476 ಪಾಯಿಂಟ್ಗಳಷ್ಟು ಕುಸಿತದೊಂದಿಗೆ 24,388ಕ್ಕೆ ತಲುಪಿದೆ.ವಲಯವಾರು ವಹಿವಾಟಿನಲ್ಲಿ ಐಟಿ ಷೇರುಗಳು ತುಸು ಸ್ಥಿರತೆ ತೋರಿದರೆ, ರಕ್ಷಣಾ ಮತ್ತು ಮೆಟಲ್ ವಲಯಗಳು ಒತ್ತಡಕ್ಕೆ ಒಳಗಾದವು. ಇನ್ಫೋಸಿಸ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮತ್ತು HCL ಟೆಕ್ನಾಲಜೀಸ್ ಷೇರುಗಳು ಲಾಭದಲ್ಲಿದ್ದರೆ L&T, ಟಾಟಾ ಸ್ಟೀಲ್, ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕಾನಾಮಿಕ್ ಝೋನ್, ಮಹೀಂದ್ರಾ & ಮಹೀಂದ್ರಾ ಮತ್ತು IndiGo ಷೇರುಗಳು ನಷ್ಟದಲ್ಲಿ ವಹಿವಾಟು ನಡೆಸುತ್ತಿವೆ.
ಈ ನಡುವೆ ಅಮೆರಿಕನ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಮೌಲ್ಯ 92 ಮಟ್ಟಕ್ಕೆ ಕುಸಿದು, ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿದೆ. ವಿದೇಶಿ ಹೂಡಿಕೆದಾರರ ಹಣ ಹೊರಹರಿವು ಮತ್ತು ಜಾಗತಿಕ ಉದ್ವಿಗ್ನತೆ ರೂಪಾಯಿ ಮೇಲೂ ಒತ್ತಡ ತಂದಿದೆ.
ಮುಂದಿನ ದಿನಗಳಲ್ಲಿ ಜಾಗತಿಕ ಯುದ್ಧ ಪರಿಸ್ಥಿತಿ ಹೇಗೆ ರೂಪುಗೊಳ್ಳುತ್ತದೆ ಎಂಬುದರ ಮೇಲೆ ದೇಶೀಯ ಮಾರುಕಟ್ಟೆಗಳ ದಿಕ್ಕು ಅವಲಂಬಿತವಾಗಿರಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.








