ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧ ಹೋರಾಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಇರಾನ್ ಉಪ ವಿದೇಶಾಂಗ ಸಚಿವ ಸಯೀದ್ ಖತಿಬ್‌ಜಾದೆ ಹೇಳಿದ್ದಾರೆ. ನಡೆಯುತ್ತಿರುವ ಸಂಘರ್ಷದ ನಡುವೆ ಇರಾನ್ ತನ್ನ ಪ್ರತಿರೋಧವನ್ನು ಮುಂದುವರಿಸಲಿದೆ ಎಂದು ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.
ನಾವು ಕೊನೆಯ ಬುಲೆಟ್, ಕೊನೆಯ ಸೈನಿಕರವರೆಗೂ ಹೋರಾಡುತ್ತೇವೆ. ನಮ್ಮ ದೇಶದ ಗೌರವ ಮತ್ತು ಭದ್ರತೆಗಾಗಿ ಹೋರಾಟ ಮುಂದುವರಿಯುತ್ತದೆ ಎಂದು ಖತಿಬ್‌ಜಾದೆ ಗುಡುಗಿದ್ದಾರೆ.
ಭಾರತೀಯ ಮಿತ್ರರ ಆಹ್ವಾನದ ಮೇರೆಗೆ IRIS Dena ಎಂಬ ಇರಾನ್ ನೌಕಾಪಡೆಯ ಯುದ್ಧನೌಕೆ ಭಾರತ ಪ್ರದೇಶದತ್ತ ಬಂದಿತ್ತು. ಆ ನೌಕೆಯಲ್ಲಿ ಯಾವುದೇ ಶಸ್ತ್ರಾಸ್ತ್ರಗಳಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ ಯಾವುದೇ ಮುನ್ನೆಚ್ಚರಿಕೆ ನೀಡದೇ ಅಮೆರಿಕಾ ದಾಳಿ ನಡೆಸಿದೆ ಎಂದು ಆರೋಪಿಸಿದ ಅವರು, ಇದು ಹಿಂದೆ ನಾಜಿ ಜರ್ಮನಿ ಮಾಡಿದ್ದ ದಾಳಿಗಳಂತೆಯೇ ನಿರಾಯುಧ ನೌಕೆ ಮೇಲೆ ನಡೆದ ಅನ್ಯಾಯದ ದಾಳಿ ಎಂದು ಅಮೆರಿಕದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಈ ಸಂಘರ್ಷವು ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಜಾಗತಿಕ ಮಟ್ಟದಲ್ಲಿಯೂ ಆತಂಕ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.








