ನೆರೆಯ ರಾಷ್ಟ್ರಗಳಿಂದ ನೇರವಾಗಿ ದಾಳಿ ನಡೆಯದ ಹೊರತು, ಆ ದೇಶಗಳನ್ನು ಗುರಿಯಾಗಿಸಿ ಯಾವುದೇ ಸೈನಿಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಚಿಯಾನ್ ಮಹತ್ವದ ಘೋಷಣೆ ಮಾಡಿದ್ದಾರೆ.
ಇಂತಹ ನಿಲುವಿಗೆ ಇರಾನ್‌ನ ಮಧ್ಯಂತರ ನಾಯಕತ್ವ ಮಂಡಳಿ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ಈ ಹೇಳಿಕೆ ಗಮನ ಸೆಳೆದಿದೆ.
ಇತ್ತೀಚಿನ ದಾಳಿಗಳ ಹಿನ್ನೆಲೆ ಕೆಲವು ನೆರೆಯ ರಾಷ್ಟ್ರಗಳಲ್ಲಿ ಆತಂಕ ಉಂಟಾಗಿರುವುದನ್ನು ಉಲ್ಲೇಖಿಸಿದ ಅಧ್ಯಕ್ಷರು, ಆ ರಾಷ್ಟ್ರಗಳಿಗೆ ಉಂಟಾದ ಅಸೌಕರ್ಯ ಮತ್ತು ಆತಂಕಕ್ಕೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಈ ಘೋಷಣೆಯ ಮೂಲಕ ಪ್ರಾದೇಶಿಕ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಈ ಹೇಳಿಕೆ ರಾಜತಾಂತ್ರಿಕವಾಗಿ ಮಹತ್ವ ಪಡೆದುಕೊಂಡಿದೆ.








