ನನಗೆ ಮೂರು ತಿಂಗಳು ಟೈಮ್ ಕೊಡಿ.. ಮೂರು ರಣಜಿ ಪಂದ್ಯ ಆಡಲು ಕೊಡಿ.. ಟೆಸ್ಟ್ ಕ್ರಿಕೆಟ್ ನಲ್ಲಿ ರನ್ ಹರಿಸುತ್ತೇನೆ – ಸೌರವ್ ಗಂಗೂಲಿ
ಸೌರವ್ ಗಂಗೂಲಿ.. ಟೀಮ್ ಇಂಡಿಯಾದ ಮಾಜಿ ನಾಯಕ. ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಿ ಬೆಳೆಸಿದ್ದ ಸೌರವ್ ಗಂಗೂಲಿಯವರನ್ನು ಕ್ರಿಕೆಟ್ ಬದುಕಿನ ಕೊನೆಯ ದಿನಗಳಲ್ಲಿ ಸರಿಯಾಗಿ ನಡೆಸಿಕೊಳ್ಳಲಿಲ್ಲ. 2005ರಲ್ಲಿ ನಾಯಕತ್ವ ಕಳೆದುಕೊಂಡ ಗಂಗೂಲಿಯವರನ್ನು ತಂಡದಿಂದಲೇ ಕೈಬಿಡಲಾಗಿತ್ತು. ಬಳಿಕ 2006ರಲ್ಲಿ ಮತ್ತೆ ತಂಡ ಸೇರಿಕೊಂಡ್ರು. 2007-08ರಲ್ಲೂ ರನ್ ಮಳೆಯನ್ನೇ ಸುರಿಸಿದ್ರು. ಆದ್ರೆ ಅವರನ್ನು ಒತ್ತಾಯಪೂರ್ವಕವಾಗಿಯೇ ಕ್ರಿಕೆಟ್ ಬದುಕಿಗೆ ವಿದಾಯ ಹೇಳಲಾಗಿತ್ತು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.
ಆದ್ರೆ ಸೌರವ್ ಗಂಗೂಲಿಗೆ ಆ ನೋವು ಮಾತ್ರ ಈಗಲೂ ಕಾಡುತ್ತಿದೆ. ಈ ಬಗ್ಗೆ ಇತ್ತೀಚಿನ ಸಾಮಾಜಿಕ ಜಾಲ ತಾಣದ ಲೈವ್ ಕಾರ್ಯಕ್ರಮದಲ್ಲೂ ಹೇಳಿಕೊಂಡಿದ್ದರು. ಇದೀಗ ಬಂಗಾಳಿ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಸೌರವ್ ಗಂಗೂಲಿ ತನ್ನಲ್ಲಿ ಕ್ರಿಕೆಟ್ ಆಡುವ ಶಕ್ತಿ ಇನ್ನೂ ಇದೆ ಎಂದು ಹೇಳಿಕೊಂಡಿದ್ದಾರೆ. ಅದಕ್ಕಾಗಿ ಸವಾಲು ಕೂಡ ಹಾಕಿದ್ದಾರೆ.
ನನಗೆ ಮೂರು ತಿಂಗಳು ಸಮಯ ಕೊಡಿ. ಮೂರು ರಣಜಿ ಪಂದ್ಯಗಳಲ್ಲಿ ಆಡುವ ಅವಕಾಶ ನೀಡಿ. ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ರನ್ ಸುರಿಸುತ್ತೇನೆ ಎಂದಿದ್ದಾರೆ. ಇದು ಸೌರವ್ ಗಂಗೂಲಿಯವರ ತಾಕತ್ತು.. ದಾದಾನ ಆತ್ಮವಿಶ್ವಾಸ. ಕೊಲ್ಕತ್ತಾ ಮಹಾರಾಜನ ಕ್ರಿಕೆಟ್ ಆಟದ ಹಸಿವು.
ಏಕದಿನ ಕ್ರಿಕೆಟ್ ನಲ್ಲಿ ಇನ್ನೆರಡು ಸರಣಿಗಳನ್ನು ನೀಡುತ್ತಿದ್ರೆ ನಾನು ಇನ್ನಷ್ಟು ರನ್ ದಾಖಲಿಸುತ್ತೆ. ನಾಗ್ಪುರ
ಟೆಸ್ಟ್ ಪಂದ್ಯದಲ್ಲಿ ವಿದಾಯ ಹೇಳದೇ ಇರುತ್ತಿದ್ರೆ, ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲೂ ರನ್ ದಾಖಲಿಸುತ್ತಿದ್ದೆ. ಈಗಲೂ ಅಷ್ಟೇ. ನನಗೆ ಅಭ್ಯಾಸಕ್ಕಾಗಿ ಆರು ತಿಂಗಳು ಸಮಯ ಕೊಡಿ. ಆಡಲು ಮೂರು ರಣಜಿ ಪಂದ್ಯಗಳನ್ನು ನೀಡಿ. ಟೆಸ್ಟ್ ಕ್ರಿಕೆಟ್ ನಲ್ಲಿ ರನ್ ಸುರಿಸುತ್ತೇನೆ. ನನಗೆ ಆರು ತಿಂಗಳು ಬೇಡ. ಮೂರು ತಿಂಗಳು ಸಾಕು. ನಾನು ಹೆಚ್ಚು ರನ್ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.
2007-08 ರಲ್ಲಿ ನನ್ನನ್ನು ತಂಡದಿಂದ ಮತ್ತೆ ಕೈಬಿಡಲಾಗಿತ್ತು. ಏಕದಿನ ತಂಡದಿಂದ ನನ್ನನ್ನು ಕೈಬಿಟ್ಟಿರುವುದು ನನಗೆ ಅಚ್ಚರಿಯಾಗಿತ್ತು. ಯಾಕಂದ್ರೆ ಆ ಕ್ಯಾಲೆಂಡರ್ ವರ್ಷದಲ್ಲಿ ನಾನು ಗರಿಷ್ಠ ರನ್ ದಾಖಲಿಸಿದ್ದೆ. ಇನ್ನೆನು ಸಾಬೀತುಪಡಿಸಬೇಕು ಎಂಬ ಭಾವನೆ ಮೂಡುವುದು ಸಹಜ. ಅದೇ ರೀತಿ ನನಗೂ ಆಗಿತ್ತು ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.
ಸೌರವ್ ಗಂಗೂಲಿ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. 113 ಟೆಸ್ಟ್ ಪಂದ್ಯಗಳಲ್ಲಿ 7212 ರನ್ ದಾಖಲಿಸಿದ್ದಾರೆ. ಅದೇ ರೀತಿ 311 ಏಕದಿನ ಪಂದ್ಯಗಳಲ್ಲಿ 11363 ರನ್ ಗಳಿಸಿದ್ದಾರೆ. ಒಟ್ಟು ಕ್ರಿಕೆಟ್ ಬದುಕಿನಲ್ಲಿ 16 ಟೆಸ್ಟ್ ಶತಕ ಹಾಗೂ 22 ಏಕದಿನ ಶತಕಗಳು ಸೇರಿ 38 ಶತಕಗಳನ್ನು ದಾಖಲಿಸಿದ್ದಾರೆ.








