ರಾಜ್ಯ ಸರ್ಕಾರ 2026-27ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಹಾಗೂ ಪಾದರಕ್ಷೆಗಳನ್ನು ಒದಗಿಸಲು ₹104 ಕೋಟಿ ಬಿಡುಗಡೆ ಮಾಡಿದೆ.
ಈ ಕುರಿತು ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಶುಭಮಂಗಳ ಆದೇಶ ಹೊರಡಿಸಿದ್ದು, ರಾಜ್ಯದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಅಂದಾಜು 36.56 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರತಿ ವಿದ್ಯಾರ್ಥಿಗೆ ಒಂದು ಜೋಡಿ ಶೂ ಹಾಗೂ ಎರಡು ಜೋಡಿ ಸಾಕ್ಸ್ ನೀಡಲಾಗುತ್ತದೆ.
ಈ ಯೋಜನೆಯಿಂದ ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ದೊರೆಯುವುದರ ಜೊತೆಗೆ, ಶಾಲಾ ಹಾಜರಾತಿ ಹೆಚ್ಚಲು ಸಹ ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.








