ಬೆಳಗಾವಿ: ರಾಜ್ಯ ಸರ್ಕಾರದ ಆದ್ಯತೆಗಳು ಮತ್ತು ಅನುದಾನ ಹಂಚಿಕೆಯ ತಾರತಮ್ಯದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆದಿದ್ದು, ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗಾರ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ನಟಿ ತಮನ್ನಾ ಭಾಟಿಯಾಗೆ ಕೋಟ್ಯಾಂತರ ರೂಪಾಯಿ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ, ಆದರೆ ಬಡ ವಿಧವೆಯರಿಗೆ ಮಾಶಾಸನ ನೀಡಲು ಹಣವಿಲ್ಲವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಮಾತನಾಡಿದ ಶರಣು ಸಲಗಾರ್, ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬವನ್ನು ಎತ್ತಿ ತೋರಿಸಿದರು. ಸರ್ಕಾರವು ಪ್ರಚಾರಕ್ಕಾಗಿ ಸಿನಿ ತಾರೆಯರಿಗೆ ಕೋಟಿ ಕೋಟಿ ಹಣ ಸುರಿಯುತ್ತಿದೆ. ತಮನ್ನಾ ಭಾಟಿಯಾ ಅವರಿಗೆ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗಾಗಿ 5 ಕೋಟಿ ರೂಪಾಯಿಯನ್ನು ಅರ್ಜೆಂಟ್ ಆಗಿ ಬಿಡುಗಡೆ ಮಾಡುತ್ತೀರಿ. ಆದರೆ ರಾಜ್ಯದ ಲಕ್ಷಾಂತರ ಬಡ ವಿಧವೆಯರಿಗೆ, ರೈತರ ಪತ್ನಿಯರಿಗೆ ಸಲ್ಲಬೇಕಾದ ವಿಧವಾ ವೇತನ ಮಾತ್ರ ತಿಂಗಳುಗಟ್ಟಲೆ ಪೆಂಡಿಂಗ್ ಉಳಿಯುತ್ತದೆ. ನಟಿಯರಿಗೆ ನೀಡುವ ಆಸಕ್ತಿ ಮತ್ತು ತರಾತುರಿ ಬಡವರ ವಿಷಯದಲ್ಲಿ ಏಕಿಲ್ಲ ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ನಡೆಯನ್ನು ಟೀಕಿಸಿದರು.
ತಾವು ಮೂಲತಃ ಶಿಕ್ಷಕರಾಗಿದ್ದ ವಿಷಯವನ್ನು ಪ್ರಸ್ತಾಪಿಸಿದ ಶರಣು ಸಲಗಾರ್, ಕಲ್ಯಾಣ ಕರ್ನಾಟಕ ಭಾಗದ ಜನರ ಬುದ್ಧಿವಂತಿಕೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ನಾವ್ಯಾರು ಹುಟ್ಟುತ್ತಲೇ ದಡ್ಡರಲ್ಲ, ನಮಗೂ ಬಹಳ ಬುದ್ಧಿವಂತಿಕೆ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಾದಗಿರಿಯಂತಹ ಹಿಂದುಳಿದ ಜಿಲ್ಲೆಯಿಂದಲೂ ನಾಲ್ವರು ಆಯ್ಕೆಯಾಗಿದ್ದಾರೆ ಎಂದು ಅಂಕಿಅಂಶ ಸಮೇತ ವಿವರಿಸಿದರು.
ಆದರೆ, ಇದೇ ಸಂದರ್ಭದಲ್ಲಿ ಆ ಭಾಗದ ಶಾಲಾ ಶಿಕ್ಷಣದ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗಳಲ್ಲಿ ಏಳು ಮತ್ತು ಎಂಟನೇ ತರಗತಿಯ ಮಕ್ಕಳಿಗೆ ಕನಿಷ್ಠ ಗುಣಾಕಾರ ಮತ್ತು ಭಾಗಾಕಾರ ಲೆಕ್ಕಗಳು ಬರುವುದಿಲ್ಲ ಎಂದು ವರದಿಯೊಂದು ಹೇಳಿದೆ. ವರದಿಯಲ್ಲಿ ಶೇಕಡಾ 75 ರಷ್ಟು ಸಮಸ್ಯೆ ಇದೆ ಎಂದು ಹೇಳಲಾಗಿದ್ದರೂ, ವಾಸ್ತವದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದ್ದು, ಕೇವಲ ಶೇಕಡಾ 45 ರಷ್ಟು ಮಕ್ಕಳಿಗೆ ಮಾತ್ರ ಕನಿಷ್ಠ ಕಲಿಕೆ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಮ್ಮ ಮಕ್ಕಳಲ್ಲಿ ಕಲಿಯುವ ಸಾಮರ್ಥ್ಯವಿದೆ, ಆದರೆ ಕಲಿಯಲು ಬೇಕಾದ ಸೌಲಭ್ಯಗಳಿಲ್ಲ. ನಮ್ಮ ಭಾಗದಲ್ಲಿ ಒಳ್ಳೆಯ ಶಾಲೆಗಳಿಲ್ಲ, ಮೂಲಭೂತ ಸೌಕರ್ಯಗಳಿಲ್ಲ. ಹೀಗಿರುವಾಗ ನಮ್ಮ ಮಕ್ಕಳು ಏನು ಮಾಡಲು ಸಾಧ್ಯ? ಅವರಿಗೆ ಕಲಿಯುವ ಭಾಗ್ಯವೇ ಇಲ್ಲದಂತಾಗಿದೆ ಎಂದು ಸರ್ಕಾರದ ಶಿಕ್ಷಣ ವ್ಯವಸ್ಥೆಯ ವೈಫಲ್ಯವನ್ನು ಸದನದ ಮುಂದಿಟ್ಟರು.
ಒಟ್ಟಾರೆಯಾಗಿ, ಸರ್ಕಾರವು ಅನಗತ್ಯ ಪ್ರಚಾರ ಮತ್ತು ರಾಯಭಾರಿಗಳಿಗೆ ನೀಡುವ ಹಣವನ್ನು ಕಡಿತಗೊಳಿಸಿ, ಬಾಕಿ ಇರುವ ವಿಧವಾ ವೇತನ ಪಾವತಿಗೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಸುಧಾರಣೆಗೆ ಬಳಸಬೇಕೆಂದು ಶರಣು ಸಲಗಾರ್ ಆಗ್ರಹಿಸಿದರು.








