ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಸಿನಿಮಾ ಧುರಂಧರ್: ದಿ ರಿವೆಂಜ್ ಅಂತಿಮವಾಗಿ ಬೆಳ್ಳಿತೆರೆಗೆ ಅಪ್ಪಳಿಸಿದೆ. ಸಿನಿಮಾ ಪ್ರೇಮಿಗಳ ದೀರ್ಘಕಾಲದ ಕಾಯುವಿಕೆಗೆ ಮಾರ್ಚ್ 19 ಕ್ಕೆ ತೆರೆ ಬಿದ್ದಿದ್ದು, ಚಿತ್ರಮಂದಿರಗಳಲ್ಲಿ ರಣವೀರ್ ಅಬ್ಬರ ಜೋರಾಗಿದೆ. ಕೇವಲ ಪ್ರೇಕ್ಷಕರಲ್ಲದೇ, ಚಿತ್ರರಂಗದ ದಿಗ್ಗಜ ನಟ-ನಟಿಯರು ಕೂಡ ಈ ಚಿತ್ರವನ್ನು ನೋಡಿ ಬೆರಗಾಗಿದ್ದಾರೆ. ದೇಶಭಕ್ತಿಯ ಕಿಚ್ಚು ಮತ್ತು ರಣವೀರ್ ಅವರ ಅದ್ಭುತ ನಟನೆಗೆ ಭಾರತೀಯ ಚಿತ್ರರಂಗವೇ ತಲೆಬಾಗಿದೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೈಕಾರ
ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ಧುರಂಧರ್ ಚಿತ್ರವನ್ನು ನೋಡಿ ಪುಲ್ ಫಿದಾ ಆಗಿದ್ದಾರೆ. ಈ ಚಿತ್ರವನ್ನು ಕೇವಲ ಒಂದು ಸಿನಿಮಾ ಎನ್ನುವುದಕ್ಕಿಂತ ಹೆಚ್ಚಾಗಿ ಅವರು ಇದನ್ನು ದೇಶಭಕ್ತಿ ಮತ್ತು ಹೆಮ್ಮೆಯ ಸಂಕೇತ ಎಂದು ಬಣ್ಣಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು ಧುರಂಧರ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕಥೆಯನ್ನು ಹೇಳುತ್ತಿದೆ. ಇದು ಪ್ರತಿಯೊಬ್ಬ ಭಾರತೀಯನೂ ಎದೆುಬ್ಬಿಸಿ ಹೆಮ್ಮೆ ಪಡುವಂತಹ ಚಿತ್ರ. ನನ್ನ ಸಹೋದರ ರಣವೀರ್ ಸಿಂಗ್ ಅವರ ನಟನೆ ಅದ್ಭುತವಾಗಿದೆ ಎಂದು ಹೇಳುವ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಮರೆಯಲಾಗದ ಅನುಭವ ಎಂದ ಕಾರ್ತಿಕ್ ಆರ್ಯನ್
ಬಾಲಿವುಡ್‌ನ ಚಾಕ್ಲೇಟ್ ಬಾಯ್ ಕಾರ್ತಿಕ್ ಆರ್ಯನ್ ಕೂಡ ಚಿತ್ರದ ಬಗ್ಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಧುರಂಧರ್: ದಿ ರಿವೆಂಜ್ ಒಂದು ಅತ್ಯುತ್ತಮ ಸಿನಿಮಾ. ನಿರ್ದೇಶಕ ಆದಿತ್ಯ ಧರ್ ಅವರು ಪ್ರೇಕ್ಷಕರಿಗೆ ಎಂದಿಗೂ ಮರೆಯಲಾಗದಂತಹ ಸಿನಿಮೀಯ ಅನುಭವವನ್ನು ನೀಡಿದ್ದಾರೆ. ರಣವೀರ್ ಅವರ ನಟನೆ ಚಿತ್ರದ ಹೈಲೈಟ್ ಆಗಿದ್ದು, ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಲೇಬೇಕು ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಸೇಡು ತೀರಿಸಿಕೊಳ್ಳುವುದಾದರೆ ಹೀಗಿರಬೇಕು: ಪ್ರೀತಿ ಜಿಂಟಾ
ಡಿಂಪಲ್ ಬೆಡಗಿ ಪ್ರೀತಿ ಜಿಂಟಾ ಅವರು ಚಿತ್ರದ ಪ್ರತಿಯೊಂದು ವಿಭಾಗವನ್ನೂ ಹೊಗಳಿದ್ದಾರೆ. ರಿವೆಂಜ್ ಹೋ ತೋ ಧುರಂಧರ್ ಜೈಸಾ ಹೋ ವಾರ್ನಾ ನ ಹೋ (ಸೇಡು ಇರುವುದಾದರೆ ಧುರಂಧರ್ ರೀತಿಯಲ್ಲಿ ಇರಬೇಕು, ಇಲ್ಲದಿದ್ದರೆ ಇರಬಾರದು) ಎಂದು ಹೇಳುವ ಮೂಲಕ ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ. ನಿರ್ದೇಶನ, ನಟನೆ, ಸಂಗೀತ, ಸಂಕಲನ ಹೀಗೆ ಎಲ್ಲಾ ವಿಭಾಗಗಳು ಅಮೋಘವಾಗಿವೆ. ನನ್ನ ತಾಯಿ ಈ ಚಿತ್ರವನ್ನು ಮತ್ತೊಮ್ಮೆ ನೋಡಲು ಬಯಸುತ್ತಿದ್ದಾರೆ ಎಂದರೆ ಚಿತ್ರದ ತಾಕತ್ತು ಎಷ್ಟಿದೆ ಎಂದು ಊಹಿಸಬಹುದು. ಇಡೀ ತಂಡಕ್ಕೆ ಜೈಹಿಂದ್ ಎಂದು ಪ್ರೀತಿ ಜಿಂಟಾ ಬರೆದುಕೊಂಡಿದ್ದಾರೆ.
ರಣವೀರ್ ಓರ್ವ ನಟ ರಾಕ್ಷಸ: ಅನನ್ಯಾ ಪಾಂಡೆ
ನಟಿ ಅನನ್ಯಾ ಪಾಂಡೆ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಚಿತ್ರದ ಬಗ್ಗೆ ಬರೆಯುತ್ತಾ, ನಿರ್ದೇಶಕ ಆದಿತ್ಯ ಧರ್ ಅವರ ಕೆಲಸವನ್ನು ಬ್ರಲಿಯಂಟ್ ಎಂದು ಕರೆದಿದ್ದಾರೆ. ಇನ್ನು ರಣವೀರ್ ಸಿಂಗ್ ಅವರ ನಟನೆಯನ್ನು ಕಂಡು ನಿಬ್ಬೆರಗಾಗಿರುವ ಅನನ್ಯಾ, ರಣವೀರ್ ಅವರನ್ನು ನಟ ರಾಕ್ಷಸ ಎಂದು ಕರೆಯುವ ಮೂಲಕ ಅವರ ಪ್ರತಿಭೆಗೆ ಕನ್ನಡಿ ಹಿಡಿದಿದ್ದಾರೆ.
ಧುರಂಧರ್ ಸಿನಿಮಾವು ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದ್ದು, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ದೇಶಭಕ್ತಿಯ ಕಥಾಹಂದರ ಹೊಂದಿರುವ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವುದರಲ್ಲಿ ಅನುಮಾನವಿಲ್ಲ.








