ಭಾರತದ ರಾಜಕೀಯ ಭೂಪಟದಲ್ಲಿ ಪಶ್ಚಿಮ ಬಂಗಾಳದ ರಾಜಕಾರಣ ಯಾವಾಗಲೂ ಒಂದು ಕುತೂಹಲದ ಕೇಂದ್ರಬಿಂದು. ಅಲ್ಲಿನ ಕೆಚ್ಚೆದೆಯ ನಾಯಕಿ ಎಂದು ಕರೆಸಿಕೊಳ್ಳುವ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ನಡೆಗಳು ರಾಜಕೀಯ ವಿಶ್ಲೇಷಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಯಾವ ದೀದಿ ಇಡೀ ರಾಜ್ಯವನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದ್ದಾರೋ ಅದೇ ನಾಯಕಿ ಇಂದು ತನ್ನದೇ ಸ್ವಕ್ಷೇತ್ರದಲ್ಲಿ ಸೋತು ಸುಣ್ಣವಾಗಿರುವುದು ಅವರ ಅತೀ ಆತ್ಮವಿಶ್ವಾಸಕ್ಕೆ ಬಿದ್ದ ದೊಡ್ಡ ಹೊಡೆತ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ನಂದಿಗ್ರಾಮದ ಸಮರದಲ್ಲಿ ಎದುರಾದ ಸೋಲು ಕೇವಲ ಒಬ್ಬ ವ್ಯಕ್ತಿಯ ಸೋಲಲ್ಲ ಅದು ಮಮತಾ ಅವರ ಅಹಂಕಾರಕ್ಕೆ ಪ್ರಜಾಪ್ರಭುತ್ವ ನೀಡಿದ ತಕ್ಕ ಉತ್ತರ ಎಂಬ ಮಾತುಗಳು ಕೇಳಿಬರುತ್ತಿವೆ. ಸಾಮಾನ್ಯವಾಗಿ ಚುನಾವಣೆಯಲ್ಲಿ ಸೋತಾಗ ನಾಯಕರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಪರಂಪರೆ ಇದೆ. ಆದರೆ ಮಮತಾ ಬ್ಯಾನರ್ಜಿ ಅವರು ಸೋತರೂ ಅಧಿಕಾರ ಬಿಡುವುದಿಲ್ಲ ಎನ್ನುವ ಹಠಕ್ಕೆ ಬಿದ್ದಿರುವುದು ಅವರ ಹತಾಶೆಯ ಪರಮಾವಧಿಯನ್ನು ತೋರಿಸುತ್ತಿದೆ. ಸೋಲನ್ನು ಗೌರವಯುತವಾಗಿ ಸ್ವೀಕರಿಸಿ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದರೆ ಅವರ ಘನತೆ ಹೆಚ್ಚುತ್ತಿತ್ತು. ಆದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಲೆಕ್ಕಿಸದ ಅವರ ಧೋರಣೆ ಈಗ ಅವರ ಮರ್ಯಾದೆಯನ್ನು ಹರಾಜು ಹಾಕುತ್ತಿದೆ.
ಶಾಸಕಿಯಾಗಿ ಆಯ್ಕೆಯಾಗದಿದ್ದರೂ ಮುಖ್ಯಮಂತ್ರಿ ಪದವಿಯಲ್ಲಿ ಮುಂದುವರಿಯುವ ಅವರ ಹಂಬಲ ರಾಜಕೀಯ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ಸದನವನ್ನು ಪ್ರವೇಶಿಸುವ ಹಕ್ಕನ್ನೇ ಕಳೆದುಕೊಂಡಿರುವ ದೀದಿಗೆ ಈಗ ಅಧಿಕಾರದ ಕುರ್ಚಿ ಕಳೆದುಕೊಳ್ಳುವ ಭೀತಿ ಕಾಡುತ್ತಿದೆ. ಇದೇ ಕಾರಣಕ್ಕೆ ಅವರು ಫಲಿತಾಂಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾ ಜನತೆಯನ್ನು ದಿಕ್ಕು ತಪ್ಪಿಸುವ ನಾಟಕವಾಡುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.
ಸಾಂವಿಧಾನಿಕವಾಗಿ ಒಬ್ಬ ವ್ಯಕ್ತಿ ಶಾಸಕರಾಗದೆ ಆರು ತಿಂಗಳಿಗಿಂತ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ. ಹೀಗಿದ್ದರೂ ಮಮತಾ ಅವರು ತೋರುತ್ತಿರುವ ದಾದಾಗಿರಿ ಅವರ ರಾಜಕೀಯ ಜೀವನದ ಅಧಃಪತನಕ್ಕೆ ದಾರಿಯಾಗುವ ಸಾಧ್ಯತೆ ಇದೆ. ಸದನದ ಅವಧಿ ಮುಗಿದ ನಂತರ ಅವರ ವಿಶೇಷ ಅಧಿಕಾರಗಳು ತಾನಾಗಿಯೇ ಅಂತ್ಯಗೊಳ್ಳುತ್ತವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ಅವರು ವರ್ತಿಸುತ್ತಿರುವುದು ವಿಷಾದನೀಯ.
ಎಲ್ಲಕ್ಕಿಂತ ಆಶ್ಚರ್ಯದ ಸಂಗತಿಯೆಂದರೆ ಮಮತಾ ಅವರ ಇಂತಹ ಅಸಂವಿಧಾನಿಕ ನಡೆಗಳನ್ನು ಬೆಂಬಲಿಸುತ್ತಿರುವ ಇತರ ಪಕ್ಷದ ನಾಯಕರ ಮನಸ್ಥಿತಿ. ಒಂದು ರಾಜ್ಯದ ಮುಖ್ಯಮಂತ್ರಿಯೇ ಸೋತ ಮೇಲೆ ಅಧಿಕಾರಕ್ಕೆ ಅಂಟಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಯಾರೂ ಕೇಳುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರಗೊಂಡಿರುವ ನಡುವೆ ರಾಜ್ಯಪಾಲ R. N. Ravi ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.ಬಂಗಾಳದ ಈ ರಾಜಕೀಯ ಹೈಡ್ರಾಮಾ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಮತ್ತು ಮಾಜಿ ಸಿಎಂ ಮಮತಾ ಅವರ ಈ ಹಠಮಾರಿತನ ಅವರನ್ನು ಇನ್ನಷ್ಟು ಪ್ರಪಾತಕ್ಕೆ ತಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.








