ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಐಷಾರಾಮಿ ವಾಚ್ ಗಳ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿ ಅವರು ಧರಿಸುವ ವಾಚ್ ಗಳ ಬೆಲೆ ಕೋಟ್ಯಂತರ ರೂಪಾಯಿ ಎಂದು ಆರೋಪಿಸಿದ್ದರು. ಈ ವಿವಾದಕ್ಕೆ ತೆರೆ ಎಳೆಯಲು ಸ್ವತಃ ಕುಮಾರಸ್ವಾಮಿ ಅವರೇ ಮಾಧ್ಯಮಗಳ ಮುಂದೆ ತಮ್ಮ ವಾಚ್ ಪ್ರದರ್ಶಿಸಿ ಸ್ಪಷ್ಟನೆ ನೀಡಿದ್ದಾರೆ.
ನನ್ನದು ಸ್ವದೇಶಿ ಎಚ್ ಎಂಟಿ ವಾಚ್
ಮಾಧ್ಯಮಗಳ ಮುಂದೆ ಕೈನಲ್ಲಿದ್ದ ವಾಚ್ ಅನ್ನು ತೋರಿಸಿದ ಕುಮಾರಸ್ವಾಮಿ ಅವರು, ಯಾರೋ ನನ್ನ ವಾಚ್ ಬೆಲೆ 80 ಲಕ್ಷ ರೂಪಾಯಿ ಎಂದು ಹಾದಿಬೀದಿಯಲ್ಲಿ ಹೇಳುತ್ತಿದ್ದಾರೆ. ದಯವಿಟ್ಟು ನೋಡಿ ಇದು ಯಾವ ವಾಚ್ ಎಂದು. ಇದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರವಿರುವ ಭಾರತದ ಎಚ್ ಎಂಟಿ ಕಂಪನಿಯ ವಾಚ್ ಎಂದು ಹೇಳುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಇದು ಸಾಮಾನ್ಯ ಬೆಲೆಯ ವಾಚ್ ಆಗಿದ್ದು, ಇದರಲ್ಲಿ ದೇಶದ ಮಹಾನ್ ನಾಯಕರ ಚಿತ್ರವಿರುವುದೇ ನನಗೆ ಹೆಮ್ಮೆ ಎಂದು ಅವರು ತಿಳಿಸಿದ್ದಾರೆ.
ಮನೆಗೆ ಎಸ್‌ಐಟಿ ಕಳಿಸಿ ಚೆಕ್ ಮಾಡಿಸಿ
ತಮ್ಮ ಬಳಿ 60 ರಿಂದ 70 ಅತ್ಯಂತ ಬೆಲೆಬಾಳುವ ವಾಚ್ ಗಳಿವೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಕುಮಾರಸ್ವಾಮಿ ಅವರು ಸವಾಲು ಎಸೆದಿದ್ದಾರೆ. ನಿಮಗೆ ಅಷ್ಟೊಂದು ಅನುಮಾನವಿದ್ದರೆ ಅಥವಾ ನಾನು ಸುಳ್ಳು ಹೇಳುತ್ತಿದ್ದೇನೆ ಎಂದೆನಿಸಿದರೆ, ಕೂಡಲೇ ನಮ್ಮ ಮನೆಗೆ ವಿಶೇಷ ತನಿಖಾ ತಂಡವನ್ನು (SIT) ಕಳಿಸಿ ತಪಾಸಣೆ ಮಾಡಿಸಿ. ಅವರು ಬಂದು ನನ್ನ ಬಳಿ ಇರುವ ವಾಚ್ ಗಳು ಯಾವುವು ಮತ್ತು ಅವುಗಳ ಬೆಲೆ ಎಷ್ಟು ಎಂಬುದನ್ನು ಪರಿಶೀಲಿಸಲಿ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ಆರೋಪಕ್ಕೆ ವ್ಯಂಗ್ಯದ ಉತ್ತರ
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರ ಬಳಿ 10 ರಿಂದ 20 ಕೋಟಿ ಮೌಲ್ಯದ 85 ವಾಚ್ ಗಳಿವೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಹೆಚ್ ಡಿಕೆ, ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಜನರ ಹಾದಿ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ಬದನೆಕಾಯಿ ಮಾರಿ ಆಸ್ತಿ ಮಾಡಿದ್ದಾರಾ ಎಂಬ ಕ್ಷುಲ್ಲಕ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು, ವಾಸ್ತವ ಏನೆಂಬುದನ್ನು ತೋರಿಸುವುದು ಸೂಕ್ತ ಎಂದು ತಾವು ಧರಿಸಿದ್ದ ವಾಚ್ ಅನ್ನು ಕ್ಯಾಮರಾ ಮುಂದೆ ಹಿಡಿದು ತೋರಿಸಿದ್ದಾರೆ.
ರಾಜಕೀಯ ವಾಕ್ಸಮರ ತಾರಕಕ್ಕೆ
ಒಟ್ಟಾರೆಯಾಗಿ ವಾಚ್ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಅವರ ಹ್ಯುಬ್ಲೋಟ್ ವಾಚ್ ವಿವಾದದ ಬಳಿಕ ಈಗ ಕುಮಾರಸ್ವಾಮಿ ಅವರ ವಾಚ್ ಬಗ್ಗೆ ಕಾಂಗ್ರೆಸ್ ದಾಳಿ ಆರಂಭಿಸಿತ್ತು. ಆದರೆ ಕುಮಾರಸ್ವಾಮಿ ಅವರು ಅಂಬೇಡ್ಕರ್ ಅವರ ಚಿತ್ರವಿರುವ ಎಚ್ ಎಂಟಿ ವಾಚ್ ತೋರಿಸುವ ಮೂಲಕ ಕಾಂಗ್ರೆಸ್ ನಾಯಕರಿಗೆ ಮುಖಭಂಗ ಉಂಟುಮಾಡಿದ್ದಾರೆ. ಈ ವಿವಾದ ಇನ್ನು ಎಲ್ಲಿಗೆ ಹೋಗಿ ತಲುಪಲಿದೆ ಎಂಬುದು ಕುತೂಹಲಕಾರಿಯಾಗಿದೆ.







