ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ವಿಶ್ವದಾದ್ಯಂತ ಇರುವ ಕೋಟ್ಯಂತರ ಭಕ್ತರು ಶ್ರದ್ಧಾಭಕ್ತಿಯಿಂದ ಸಮರ್ಪಿಸಿದ ದೇಣಿಗೆ ಮತ್ತು ಕಾಣಿಕೆಯನ್ನು ದುರುಪಯೋಗಪಡಿಸಿಕೊಂಡ ಘಟನೆ ಈಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಕ್ರಮದ ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತಿರುವ ಉತ್ತರ ಪ್ರದೇಶ ಸರ್ಕಾರ, ಎಂಟು ಜನರನ್ನು ಜೈಲಿಗಟ್ಟುವ ಮೂಲಕ ತಪ್ಪಿತಸ್ಥರಿಗೆ ಕಠಿಣ ಸಂದೇಶ ರವಾನಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸನಾತನ ಮೌಲ್ಯಗಳು ಮತ್ತು ಸಾರ್ವಜನಿಕರ ನಂಬಿಕೆಯೊಂದಿಗೆ ಚೆಲ್ಲಾಟವಾಡುವವರ ವಿರುದ್ಧ ನಮ್ಮ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ ಎಂದು ಎಚ್ಚರಿಸಿದ್ದಾರೆ.
ರಾಜಿ ಇಲ್ಲದ ಹೋರಾಟ
ವಿಶೇಷ ತನಿಖಾ ತಂಡ (SIT) ನೀಡಿದ ಪ್ರಾಥಮಿಕ ವರದಿಯ ಆಧಾರದ ಮೇಲೆ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿದ್ದಾರೆ. ದೇವರಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಅಯೋಧ್ಯೆಯ ಪವಿತ್ರತೆ ಮತ್ತು ಘನತೆಗೆ ಧಕ್ಕೆ ತರುವಂತಹ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ. ಅಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ತಕ್ಕ ಶಿಕ್ಷೆಯಾಗಲಿದೆ ಎಂದು ಗುಡುಗಿದ್ದಾರೆ. ಭಕ್ತರ ನಂಬಿಕೆಯು ಸರ್ಕಾರದ ಪಾಲಿಗೆ ಅತ್ಯಂತ ದೊಡ್ಡದು, ಅದನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಇದೇ ವೇಳೆ ಹಳೆಯ ಘಟನೆಗಳನ್ನು ನೆನಪಿಸುವ ಮೂಲಕ ವಿರೋಧ ಪಕ್ಷಗಳ ವಿರುದ್ಧ ಯೋಗಿ ತೀವ್ರ ವಾಗ್ದಾಳಿ ನಡೆಸಿದರು. ಒಂದು ಕಾಲದಲ್ಲಿ ಶ್ರೀರಾಮನೇ ಇಲ್ಲ ಎಂದು ನ್ಯಾಯಾಲಯದಲ್ಲಿ ವಕೀಲರ ದಂಡನ್ನೇ ನಿಲ್ಲಿಸಿದ್ದವರು ಮತ್ತು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದವರ ಮೇಲೆ ಗುಂಡು ಹಾರಿಸಿದವರು ಈಗ ನಂಬಿಕೆಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು. ರಾಮನವಮಿ ಮೆರವಣಿಗೆಗೆ ಅಡ್ಡಿಪಡಿಸಿದವರು ಮತ್ತು ಹಬ್ಬಗಳ ಮೇಲೆ ನಿರ್ಬಂಧ ಹೇರಿದವರು ಇಂದು ಅಯೋಧ್ಯೆಯತ್ತ ಬೆರಳು ತೋರಿಸುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ವಿರುದ್ಧ ಹರಿಹಾಯ್ದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಕೃಷ್ಣ ಮೋಹನ್ ನೀಡಿದ ದೂರಿನ ಮೇರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಮಾಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮ್ ಶಂಕರ್ ಯಾದವ್ ಎಂಬುವವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇವರ ವಿರುದ್ಧ ಕಳ್ಳತನ, ನಂಬಿಕೆ ದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರದ ಅಡಿಯಲ್ಲಿ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ.
ಎಸ್‌ಐಟಿ ತನಿಖೆಯ ವೇಳೆ ಮಂದಿರದ ದೇಣಿಗೆ ನಿರ್ವಹಣಾ ವ್ಯವಸ್ಥೆಯಲ್ಲಿ ಹಲವು ಗಂಭೀರ ಲೋಪದೋಷಗಳು ಕಂಡುಬಂದಿವೆ. ಸಿಸಿಟಿವಿ ಕಣ್ಗಾವಲಿನ ಕೊರತೆ ಮತ್ತು ಹಣವನ್ನು ಬ್ಯಾಂಕ್ ಗೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿ ಭದ್ರತೆಯ ವೈಫಲ್ಯವಿರುವುದನ್ನು ತನಿಖಾ ತಂಡ ಪತ್ತೆ ಮಾಡಿದೆ. ಖಾಸಗಿ ಏಜೆನ್ಸಿಯ ಮೂಲಕ ನೇಮಕಗೊಂಡಿದ್ದ ಸಿಬ್ಬಂದಿಯೇ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ. ಭಕ್ತರು ನೀಡಿದ ಚಿನ್ನ ಮತ್ತು ಬೆಳ್ಳಿಯ ದಾಖಲೆಗಳನ್ನು ಸಹ ತನಿಖಾ ತಂಡ ಈಗ ಮರುಪರಿಶೀಲನೆ ನಡೆಸುತ್ತಿದೆ.







