ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ. ತಮ್ಮ ಶಿಕ್ಷಣ ಸಂಸ್ಥೆಯ ಬಗ್ಗೆ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಪ್ರದೀಪ್ ಈಶ್ವರ್, ತಾಕತ್ತಿದ್ದರೆ ನನ್ನ ಮೇಲೆ ಐಟಿ ಮತ್ತು ಇಡಿ ದಾಳಿ ಮಾಡಿಸಿ ಎಂದು ನೇರ ಸವಾಲು ಹಾಕಿದ್ದಾರೆ. ಅಲ್ಲದೆ ಕುಮಾರಸ್ವಾಮಿ ಅವರ ಆಸ್ತಿ ಮತ್ತು ಐಷಾರಾಮಿ ಜೀವನದ ಬಗ್ಗೆ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ.
ಬದನೆಕಾಯಿ ಮಾರಿ ಇಷ್ಟೊಂದು ಆಸ್ತಿ ಮಾಡಿದರೇ
ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಪ್ರದೀಪ್ ಈಶ್ವರ್, ಕುಮಾರಸ್ವಾಮಿ ಅವರ ಬಳಿ ಸುಮಾರು 85 ಬೆಲೆಬಾಳುವ ವಾಚುಗಳಿವೆ ಮತ್ತು 700 ರಿಂದ 800 ಎಕರೆ ಜಮೀನಿದೆ. ಅವರ ವಾಚ್ ಗಳ ಮೌಲ್ಯವೇ 10 ರಿಂದ 20 ಕೋಟಿ ರೂಪಾಯಿ ಆಗುತ್ತದೆ. ಇಷ್ಟೊಂದು ಆಸ್ತಿಯನ್ನು ಅವರು ಬದನೆಕಾಯಿ ಮಾರಿ ಗಳಿಸಿದ್ದಾರೆಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಅವರ ಪಂಚೆ ಮಾತ್ರ ಸಿಂಪಲ್, ಆದರೆ ಉಳಿದದ್ದೆಲ್ಲಾ ಅತ್ಯಂತ ದುಬಾರಿ ಎಂದು ಲೇವಡಿ ಮಾಡಿದ್ದಾರೆ.
ಪರಿಶ್ರಮ ಅಕಾಡೆಮಿ ವಿಚಾರ ಮತ್ತು ತೆರಿಗೆ ಪಾವತಿ
ತಮ್ಮ ಪರಿಶ್ರಮ ನೀಟ್ ಅಕಾಡೆಮಿಗೆ ಸಿಎ ಸೈಟ್ ಮಂಜೂರಾಗಿರುವ ವಿಚಾರವಾಗಿ ಸ್ಪಷ್ಟನೆ ನೀಡಿದ ಶಾಸಕರು, ಈ ವಿಷಯದಲ್ಲಿ ಹೈಕೋರ್ಟ್ ನನಗೆ ಚಾಟಿ ಬೀಸಿಲ್ಲ, ಕೇವಲ ವಿವರಣೆ ಕೇಳಿದೆ. ನಾನು ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡುತ್ತೇನೆ ಮತ್ತು ಕೇಸ್ ಗೆಲ್ಲುತ್ತೇನೆ. ನಾನು ನಿಮ್ಮಂತೆ ಕಿಕ್ ಬ್ಯಾಕ್ ಅಥವಾ ಪರ್ಸೆಂಟೇಜ್ ಪಡೆದು ಹಣ ಮಾಡಿಲ್ಲ. ಪ್ರತಿ ವರ್ಷ 40 ಲಕ್ಷ ರೂಪಾಯಿ ತೆರಿಗೆ ಕಟ್ಟುತ್ತಿದ್ದೇನೆ. ನಾನು ಬಳ್ಳಾರಿಯ ಗಣಿ ಅಕ್ರಮದ ಹಣದಿಂದ ಆಸ್ತಿ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಅವರು ಇತರ ಒಕ್ಕಲಿಗ ನಾಯಕರು ಬೆಳೆಯುವುದನ್ನು ಸಹಿಸುವುದಿಲ್ಲ ಎಂದು ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ. ಮಾಜಿ ಪ್ರಧಾನಿಗಳ ಮಗ ಮುಖ್ಯಮಂತ್ರಿಯಾಗಬಹುದು, ಮೊಮ್ಮಗ ಸಂಸದನಾಗಬಹುದು, ಆದರೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬಾರದೇ ಎಂದು ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಅವರು ಬಡವರ ಮತ್ತು ಹಿಂದುಳಿದ ವರ್ಗದ ಮಕ್ಕಳು ಬೆಳೆಯುವುದನ್ನು ತಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಡದಿಯಲ್ಲಿ ಅನಿತಾ ಕುಮಾರಸ್ವಾಮಿ ಅವರು 32 ಎಕರೆ ಜಮೀನು ಖರೀದಿಸಿರುವ ಬಗ್ಗೆ ಪ್ರಸ್ತಾಪಿಸಿದ ಪ್ರದೀಪ್ ಈಶ್ವರ್, ಅವರು ಆ ಜಮೀನನ್ನು ರಾಮ್ ರಾಜ್ ಪಂಚೆ ಮಾರಿ ಖರೀದಿಸಿದ್ದಾರೆಯೇ ಎಂದು ಪ್ರಶ್ನಿಸುವ ಮೂಲಕ ಕುಮಾರಸ್ವಾಮಿ ಕುಟುಂಬದ ಆಸ್ತಿ ವಿವರಗಳ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಮಗನನ್ನು ಮೂರು ಬಾರಿ ಚುನಾವಣೆಗೆ ನಿಲ್ಲಿಸಿದರೂ ಗೆಲ್ಲಿಸಲು ಸಾಧ್ಯವಾಗದ ಕುಮಾರಸ್ವಾಮಿ, ಕಾಂಗ್ರೆಸ್ ಗೆದ್ದಿರುವುದನ್ನು ಸಹಿಸಿಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.








