ಬಹು ದಿನಗಳ ತೀವ್ರ ಕುತೂಹಲ ಹಾಗೂ ಒಳಮನೆ ಜಟಾಪಟಿಗೆ ಕೊನೆಗೂ ತೆರೆಬಿದ್ದಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಹಿರಿಯ ನಾಯಕ, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಹಾಗೂ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು ಕಣಕ್ಕಿಳಿಯುವುದು ಖಚಿತವಾಗಿದೆ. ಅಲ್ಪಸಂಖ್ಯಾತ ನಾಯಕರ ತೀವ್ರ ಪೈಪೋಟಿ ಹಾಗೂ ಒತ್ತಡಗಳ ನಡುವೆಯೂ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಅಂತಿಮವಾಗಿ ಯುವ ನಾಯಕನಿಗೆ ಮಣೆ ಹಾಕುವ ಮೂಲಕ ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೈಕಮಾಂಡ್ ನಿಂದ ಟಿಕೆಟ್ ಖಚಿತವಾದ ಸುದ್ದಿ ಹೊರಬೀಳುತ್ತಿದ್ದಂತೆಯೇ ದಾವಣಗೆರೆ ನಗರದಲ್ಲಿ ಶಾಮನೂರು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಕ್ಷರಶಃ ಹಬ್ಬ ಆಚರಿಸಿದ್ದಾರೆ. ಪರಸ್ಪರ ಸಿಹಿ ತಿನ್ನಿಸಿ, ಹೂವಿನ ಹಾರ ಹಾಕಿ, ಪಟಾಕಿ ಸಿಡಿಸುವ ಮೂಲಕ ತಮ್ಮ ನಾಯಕನಿಗೆ ಜೈಕಾರ ಕೂಗಿದ್ದಾರೆ. ಈ ನಡುವೆ ಕುರುಬರಕೇರಿ ಸೇರಿದಂತೆ ಕ್ಷೇತ್ರದ ವಿವಿಧೆಡೆ ಬರಿಗಾಲಿನಲ್ಲಿಯೇ ಎಲೆಕ್ಟ್ರಿಕ್ ಸ್ಕೂಟರ್ ಏರಿ ಸಂಚರಿಸಿದ ಸಮರ್ಥ್, ಸ್ಥಳೀಯ ಮುಖಂಡರ ಮನೆಗಳಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆಯುವ ಮೂಲಕ ತಮ್ಮ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ.
ಅಧಿಕೃತ ಘೋಷಣೆ ಬಳಿಕ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ ಸಮರ್ಥ್ ಶಾಮನೂರು, ತಾವು ದಾವಣಗೆರೆಯ ಗ್ರಾಮ ದೇವತೆ ಶ್ರೀ ದುಗ್ಗಮ್ಮನ ದೇವಸ್ಥಾನದ ಒಳಗೆ ಪ್ರವೇಶಿಸಿ ಕೈ ಮುಗಿಯುತ್ತಿದ್ದಂತೆಯೇ ಟಿಕೆಟ್ ಘೋಷಣೆಯಾದ ಶುಭ ಸುದ್ದಿ ಬಂದಿದೆ. ದೇವರ ಆಶೀರ್ವಾದ ಹಾಗೂ ಶುಭ ಸೂಚನೆಗಳು ಸದಾ ನಮ್ಮೊಂದಿಗಿವೆ ಎಂದು ಭಾವುಕರಾದರು.
ರಾಜಕೀಯದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾಗ ಸಣ್ಣಪುಟ್ಟ ಗೊಂದಲಗಳು ಹಾಗೂ ಪೈಪೋಟಿ ಸಹಜ. ಆದರೆ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಯನ್ನು ಪಕ್ಷ ಸೂಕ್ತವಾಗಿ ಗುರುತಿಸಿದೆ. ಈ ಊರಿನ ಮಗನಾಗಿರುವ ನನ್ನ ಮೇಲೆ ಜನತೆಗೆ ಅಪಾರ ವಿಶ್ವಾಸವಿದೆ, ಅವರು ನನ್ನನ್ನು ಕೈಬಿಡುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಾವಣಗೆರೆಯಲ್ಲಿ ಭರ್ಜರಿ ಜಯಭೇರಿ ಬಾರಿಸುವುದು ನಿಶ್ಚಿತ ಎಂದು ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದರು.
ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ಒಲಿದಿರುವ ಬಗ್ಗೆ ಅತೀವ ಸಂತಸ ಹಂಚಿಕೊಂಡಿರುವ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಪಕ್ಷದ ವರಿಷ್ಠರು, ರಾಜ್ಯ ನಾಯಕರು ಹಾಗೂ ಪ್ರತಿಯೊಬ್ಬ ಕಾರ್ಯಕರ್ತರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವವರನ್ನು ಕಾಂಗ್ರೆಸ್ ಸದಾ ಗುರುತಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.
ಕ್ಷೇತ್ರದಲ್ಲಿನ ಬಂಡಾಯದ ವದಂತಿಗಳನ್ನು ತಳ್ಳಿಹಾಕಿದ ಅವರು, ಅಲ್ಪಸಂಖ್ಯಾತರು ಹಾಗೂ ನಾವು ಅಣ್ಣ ತಮ್ಮಂದಿರಂತೆ ಒಟ್ಟಾಗಿದ್ದೇವೆ. ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಲು ಯತ್ನಿಸಿರಬಹುದು, ಆದರೆ ನಾವೆಲ್ಲರೂ ಒಂದೇ, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಪಸಂಖ್ಯಾತರು, ದಲಿತರು ಸೇರಿದಂತೆ ಎಲ್ಲಾ ವರ್ಗದ ಜನರೊಂದಿಗೆ ನಮ್ಮ ಕುಟುಂಬ ಕಳೆದ ನಲವತ್ತು ವರ್ಷಗಳಿಂದ ಅಭೂತಪೂರ್ವ ಬಾಂಧವ್ಯ ಹೊಂದಿದೆ. ಎಲ್ಲರ ಒಗ್ಗೂಡುವಿಕೆ ಹಾಗೂ ವಿಶ್ವಾಸದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ವಿರೋಧಿಗಳಿಗೆ ರಾಜಕೀಯ ಸಂದೇಶ ರವಾನಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಕದನವು ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶಾಮನೂರು ಕುಟುಂಬದ ಮೂರನೇ ತಲೆಮಾರಿನ ನಾಯಕನ ಅಧಿಕೃತ ಎಂಟ್ರಿಯೊಂದಿಗೆ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಕಾಂಗ್ರೆಸ್ ಪಾಳಯದಲ್ಲಿ ಈಗ ಒಗ್ಗಟ್ಟಿನ ಪ್ರದರ್ಶನದೊಂದಿಗೆ ಗೆಲುವಿನ ಕಾರ್ಯತಂತ್ರಗಳು ಬಿರುಸುಗೊಂಡಿವೆ.








