ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಈಶ್ವರಪ್ಪ ಫುಲ್ ಗರಂ
ಶಿವಮೊಗ್ಗ : ಸಚಿವ ಕೆ.ಎಸ್ ಈಶ್ವರಪ್ಪ, ಸರಿಯಾಗಿ ಕೆಲಸ ಮಾಡುವುದಾದರೆ ಮಾಡಿ, ಇಲ್ಲದಿದ್ದರೆ ಹೊರಡಿ. ಜಿಲ್ಲೆಗೆ ಬೇರೆಯವರನ್ನು ಹಾಕಿಸಿಕೊಳ್ಳುತ್ತೇವೆ ಎಂದು ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿಗಳ ವಿರುದ್ದ ಫುಲ್ ಗರಂ ಆಗಿದ್ದಾರೆ.
ಗುರುವಾರ ರಾತ್ರಿ ಶಿವಮೊಗ್ಗದ ಸೀಗೆಹಟ್ಟಿ ಬಡಾವಣೆಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಆಟೋಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಪ್ರದೇಶಕ್ಕೆ ಇಂದು ಸಚಿವ ಈಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಈಶ್ವರಪ್ಪ, ಕಳೆದ ವಾರ ಸಹ ಶಿವಮೊಗ್ಗದ ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಹಾಗೂ ಲಾರಿಗೆ ಬೆಂಕಿ ಹಚ್ಚಲಾಗಿದೆ. ಕೊಲೆ ಪ್ರಕರಣಗಳು ನಡೆಯುತ್ತಿವೆ. ಹೀಗಿದ್ದರೂ ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ, ಇಂತಹ ಪ್ರಕರಣ ತಡೆಗಟ್ಟುವಲ್ಲಿ ಮುಂದಾಗಿಲ್ಲ ಎಂಬ ಅಸಮಾಧಾನ ಹೊರಹಾಕಿದರು. ಇದೇ ವೇಳೆ ಸರಿಯಾಗಿ ಕೆಲಸ ಮಾಡುವುದಾದರೆ ಮಾಡಿ ಇಲ್ಲದಿದ್ದರೆ ಹೊರಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.








