ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆ ಕಾವು ಏರುತ್ತಿದ್ದಂತೆಯೇ ರಾಜಕೀಯ ಹೈಡ್ರಾಮಾ ತಾರಕಕ್ಕೇರಿದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಮತ್ತು ರಾಜ್ಯ ನಾಯಕರ ತೀವ್ರ ಒತ್ತಡದ ನಡುವೆಯೂ, ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ತಮ್ಮ ನಿಲುವಿಗೆ ಬದ್ಧರಾಗಿದ್ದು, ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ನಡುಕ ಹುಟ್ಟಿಸಿದ್ದಾರೆ.
ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಸ್ಪರ್ಧೆಯ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದರಲ್ಲದೆ, ಕಾಂಗ್ರೆಸ್ ನಾಯಕರ ವಿರುದ್ಧ ನೇರವಾಗಿಯೇ ಸಮರ ಸಾರಿದ್ದಾರೆ.
ಸಾಕ್ಷಾತ್ ಪರಮಾತ್ಮನೇ ಬಂದರೂ ನಾಮಪತ್ರ ವಾಪಸ್ ಇಲ್ಲ
ತಮ್ಮನ್ನು ಮನವೊಲಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಬರುತ್ತಾರೆ ಎಂಬ ಸುದ್ದಿಗೆ ಖಾರವಾಗಿ ಪ್ರತಿಕ್ರಿಯಿಸಿದ ಸಾದಿಕ್ ಪೈಲ್ವಾನ್, ಜಮೀರ್ ಅಹ್ಮದ್ ಖಾನ್ ಮನವೊಲಿಸಲು ಬಂದರೆ ಅವರಿಗೆ ನನ್ನ ಉತ್ತರ ಗೋ ಬ್ಯಾಕ್ ಮಾತ್ರ. ಜಮೀರ್ ಅಹ್ಮದ್ ಅಷ್ಟೇ ಅಲ್ಲ, ಸಾಕ್ಷಾತ್ ಆ ಪರಮಾತ್ಮನೇ ಭೂಮಿಗೆ ಇಳಿದು ಬಂದು ಹೇಳಿದರೂ ನಾನು ಸಲ್ಲಿಸಿರುವ ನಾಮಪತ್ರವನ್ನು ವಾಪಸ್ ಪಡೆಯುವುದಿಲ್ಲ. ಈ ನಿರ್ಧಾರ ಅಚಲ ಎಂದು ತಮ್ಮ ಶಪಥವನ್ನು ಸ್ಪಷ್ಟಪಡಿಸಿದರು.
ರಾಜ್ಯದ ಅಲ್ಪಸಂಖ್ಯಾತ ನಾಯಕರಾದ ಜಮೀರ್ ಅಹ್ಮದ್, ನಾಸೀರ್ ಅಹ್ಮದ್ ಹಾಗೂ ರಹೀಂ ಖಾನ್ ಅವರ ಕಾರ್ಯವೈಖರಿ ಮತ್ತು ನಡೆವಳಿಕೆಗಳ ಬಗ್ಗೆ ನನಗೆ ಮತ್ತು ಇಡೀ ಸಮುದಾಯಕ್ಕೆ ಅತೀವ ಬೇಸರವಿದೆ. ಹೀಗಿರುವಾಗ ಅವರು ಬಂದು ನನ್ನ ಮನವೊಲಿಸುವ ಪ್ರಯತ್ನ ಮಾಡುವುದು ವ್ಯರ್ಥ ಎಂದು ಕಿಡಿಕಾರಿದರು.
ಸುಳ್ಳು ಸುದ್ದಿ ಹಬ್ಬಿಸುವವರಿಗೆ ಎಚ್ಚರಿಕೆ
ನಾನು ಕಣದಿಂದ ನಿವೃತ್ತನಾಗಿದ್ದೇನೆ ಮತ್ತು ನಾಮಪತ್ರ ವಾಪಸ್ ಪಡೆದಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನನ್ನ ಬೆಂಬಲಿಗರು ಮತ್ತು ಮತದಾರರು ಇಂತಹ ವದಂತಿಗಳಿಗೆ ಕಿವಿಗೊಡಬಾರದು. ನಾನು ನೂರಕ್ಕೆ ನೂರರಷ್ಟು ಚುನಾವಣಾ ಕಣದಲ್ಲಿ ಇರುತ್ತೇನೆ. ನನ್ನ ತೇಜೋವಧೆ ಮಾಡಲು ಮತ್ತು ಗೊಂದಲ ಸೃಷ್ಟಿಸಲು ಇಂತಹ ಸುಳ್ಳು ಸುದ್ದಿ ಹರಡುತ್ತಿರುವ ಕಿಡಿಗೇಡಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.
ಅಹಿಂದ ಮತ್ತು ಅಲ್ಪಸಂಖ್ಯಾತರ ಕಡೆಗಣನೆಯೇ ಸ್ಪರ್ಧೆಗೆ ಕಾರಣ
ನಾನು ಬಂಡಾಯವೆದ್ದಿರುವುದು ನನಗೋಸ್ಕರ ಅಲ್ಲ, ಬದಲಾಗಿ ಇಡೀ ರಾಜ್ಯದಲ್ಲಿ ಅಲ್ಪಸಂಖ್ಯಾತ ಮತ್ತು ಅಹಿಂದ ವರ್ಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ. ಕಾಂಗ್ರೆಸ್ ಪಕ್ಷವು ಈ ಸಮುದಾಯಗಳನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂಬ ಆಕ್ರೋಶ ಎಲ್ಲೆಡೆ ಇದೆ. ನನ್ನನ್ನು ಮನವೊಲಿಸುವ ಮುನ್ನ ಕಾಂಗ್ರೆಸ್ ನಾಯಕರು ನೊಂದಿರುವ ನಮ್ಮ ಸಮಾಜದವರ ಮತ್ತು ಅಹಿಂದ ವರ್ಗದವರ ಮನವೊಲಿಸಲಿ. ಉಳಿದ ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯಲು ಹೇಳಿ, ನಾನೊಬ್ಬನೇ ಕಣದಲ್ಲಿ ಉಳಿಯುತ್ತೇನೆ ಎಂದು ಸವಾಲು ಹಾಕಿದರು.
ಹೈಕಮಾಂಡ್ ಕರೆಗೂ ಡೋಂಟ್ ಕೇರ್
ಪಕ್ಷದ ಹೈಕಮಾಂಡ್ ನಾಯಕರಿಂದ ನನಗೆ ನಿರಂತರವಾಗಿ ಫೋನ್ ಕರೆಗಳು ಬರುತ್ತಿವೆ. ಆದರೆ ನಾನು ಯಾರ ಕರೆಯನ್ನೂ ಸ್ವೀಕರಿಸಿಲ್ಲ ಮತ್ತು ಸ್ವೀಕರಿಸುವುದೂ ಇಲ್ಲ. ಅಲ್ಪಸಂಖ್ಯಾತರನ್ನು ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ಅನಿವಾರ್ಯವಾಗಿದೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಶಕ್ತಿ ಏನು ಎಂಬುದು ತಿಳಿಯಲಿದೆ. ಈ ಬಾರಿ ನಾವು ನೀಡುವ ಏಟು ಬಿಗ್ ಶಾಕ್ ನೀಡಲಿದೆ ಎಂದು ಸಾದಿಕ್ ಪೈಲ್ವಾನ್ ಗುಡುಗಿದ್ದಾರೆ.








