ಸಮಾಜದ ಆಗುಹೋಗುಗಳ ಬಗ್ಗೆ ಸದಾ ನಿರ್ಭೀತಿಯಿಂದ ದನಿ ಎತ್ತುತ್ತಾ, ಕಳೆದ ದಶಕದಿಂದ ಬಲಪಂಥೀಯ ವಿಚಾರಧಾರೆಗಳ ವಿರುದ್ಧ ಸಮರ ಸಾರಿರುವ ಬಹುಭಾಷಾ ನಟ ಕಿಶೋರ್, ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಕೆಂಡಕಾರಿದ್ದಾರೆ. ದೇಶದಲ್ಲಿ ದ್ವೇಷದ ರಾಜಕಾರಣ ಮಾಡಿ, ಈಗ ಒಂದೇ ರಾಷ್ಟ್ರ ಎಂದು ಕರೆಯಲು ನಿಮಗೆ ನೈತಿಕತೆ ಇದೆಯೇ ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸುದೀರ್ಘ ಬರಹ ಹಂಚಿಕೊಂಡಿರುವ ಕಿಶೋರ್, ಕೇಂದ್ರ ಸರ್ಕಾರದ ನಡೆ ಮತ್ತು ಪ್ರಧಾನಿಯವರ ಮೌನ ಹಾಗೂ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಸಾಲು ಸಾಲು ಪ್ರಶ್ನೆಗಳ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ದ್ವೇಷ ಹರಡಿದ ಮೇಲೆ ಒಗ್ಗಟ್ಟು ಸಾಧ್ಯವೇ
ದೇಶದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರೆಂದು ಜಾತಿ ಧರ್ಮಗಳ ಹೆಸರಿನಲ್ಲಿ ಜನರನ್ನು ವಿಭಜಿಸಿ, ಅವರ ಮನಸ್ಸಿನಲ್ಲಿ ದ್ವೇಷದ ವಿಷವನ್ನು ತುಂಬಿದ ಬಳಿಕ, ಈಗ ಒಟ್ಟಿಗೆ, ಒಂದು ರಾಷ್ಟ್ರದಂತೆ ಇರೋಣ ಎಂದು ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕಿಶೋರ್ ಖಾರವಾಗಿ ಪ್ರಶ್ನಿಸಿದ್ದಾರೆ. ಸಮಾಜವನ್ನು ಚೂರು ಚೂರು ಮಾಡಿ, ಇನ್ನೆಂದೂ ಒಂದಾಗಲು ಸಾಧ್ಯವೇ ಇಲ್ಲದ ಸ್ಥಿತಿಗೆ ತಂದು ನಿಲ್ಲಿಸಿದ ನಂತರ, ಏಕತೆಯ ಮಾತುಗಳನ್ನಾಡುವುದು ವಿಪರ್ಯಾಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಕಪಕ್ಷೀಯ ನಿರ್ಧಾರಗಳಿಗೆ ಧಿಕ್ಕಾರ
ಕೇಂದ್ರ ಸರ್ಕಾರವು ದೇಶದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯಾರನ್ನೂ ಸಂಪರ್ಕಿಸಿಲ್ಲ ಎಂಬುದು ಕಿಶೋರ್ ಅವರ ಪ್ರಮುಖ ಆರೋಪವಾಗಿದೆ. ರಫೇಲ್ ಒಪ್ಪಂದದಿಂದ ಹಿಡಿದು ಜೆಫ್ರಿ ಎಪ್ಸ್ಟೀನ್ ಪ್ರಕರಣದವರೆಗೆ, ನೋಟು ಅಮಾನ್ಯೀಕರಣದಿಂದ ಕೊರೊನಾ ಲಾಕ್‌ಡೌನ್‌ವರೆಗೆ, ವಿವಾದಿತ ಕೃಷಿ ಕಾನೂನುಗಳಿಂದ ಅಗ್ನಿವೀರ್ ಯೋಜನೆಯವರೆಗೆ ಪ್ರತಿಯೊಂದು ನಿರ್ಧಾರವನ್ನೂ ಏಕಾಏಕಿ ಹೇರಲಾಗಿದೆ. ಮಣಿಪುರದ ಹಿಂಸಾಚಾರವಾಗಲಿ, ಕಾಶ್ಮೀರ ಅಥವಾ ಲಡಾಖ್ ವಿಚಾರವಾಗಲಿ, ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಮುನ್ನ ವಿರೋಧ ಪಕ್ಷದ ನಾಯಕರನ್ನಾಗಲಿ, ಅಥವಾ ನಮ್ಮ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿರುವ ನಿಮ್ಮದೇ ಹಿರಿಯ ಅಧಿಕಾರಿಗಳನ್ನಾಗಲಿ ನೀವು ಕೇಳಿದ್ದೀರಾ ಎಂದು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಯುದ್ಧ ಅಪರಾಧಿಗಳ ಪರ ನಿಲುವು
ಜಾಗತಿಕ ಮಟ್ಟದ ವಿಚಾರಗಳಲ್ಲೂ ಕೇಂದ್ರದ ನಿಲುವನ್ನು ಕಿಶೋರ್ ಟೀಕಿಸಿದ್ದಾರೆ. ಸಾಮೂಹಿಕ ಹತ್ಯಾಕಾಂಡ ನಡೆಸುವವರನ್ನು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಎಸಗುವಂತಹ ಗಂಭೀರ ಆರೋಪವಿರುವವರನ್ನು ಅಪ್ಪಿಕೊಳ್ಳುವ ಮುನ್ನ ಅಥವಾ ನಾವು ಯುದ್ಧ ಅಪರಾಧಿಗಳ ಜೊತೆ ನಿಲ್ಲುತ್ತೇವೆ ಎಂದು ಘೋಷಿಸುವ ಮುನ್ನ ದೇಶದ ಜನರ ಅನುಮತಿ ಕೇಳಿದ್ದೀರಾ ಎಂದು ಅವರು ಗಂಭೀರವಾಗಿ ಪ್ರಶ್ನಿಸಿದ್ದಾರೆ.
ಇನ್ನೆಷ್ಟು ಬೆಲೆ ತೆರಬೇಕು
ನಿಮ್ಮ ತಪ್ಪುಗಳನ್ನು ಮತ್ತು ರಹಸ್ಯಗಳನ್ನು ಮುಚ್ಚಿಡಲು ದೇಶದ ಜನಸಾಮಾನ್ಯರು ಇನ್ನೆಷ್ಟು ಬೆಲೆ ತೆರಬೇಕು? ನಿಮ್ಮ ರಾಜೀ ಮತ್ತು ಶರಣಾಗತಿಯ ರಾಜಕಾರಣದಿಂದಾಗಿ ನಾವು ಇನ್ನೆಷ್ಟು ಹೊಸ ಸವಾಲುಗಳನ್ನು ಎದುರಿಸಬೇಕಿದೆ? ಎಂದು ಕಿಶೋರ್ ಕಳವಳ ವ್ಯಕ್ತಪಡಿಸಿದ್ದಾರೆ.
ಅಂತಿಮವಾಗಿ, ಒನ್ ನೇಷನ್ ಅಥವಾ ಒಂದೇ ರಾಷ್ಟ್ರ ಎಂಬ ಪರಿಕಲ್ಪನೆಯನ್ನು ವಿರೋಧಿಸಿರುವ ಕಿಶೋರ್, ನಾವು ಭಾರತದ ಜನರು ಇದಕ್ಕೆ ತಯಾರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಿಶೋರ್ ಅವರ ಈ ಪೋಸ್ಟ್ ಈಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪರ ವಿರೋಧದ ಚರ್ಚೆಗಳು ಆರಂಭವಾಗಿವೆ.






